ದೊಡ್ಡಬಳ್ಳಾಪುರ: ಮನೆಯ ಮುಂದೆ ನಿಲ್ಲಿಸಲಾಗಿದ್ದ ಕಾರು ಹಾಗೂ ಕಾಂಪೌಂಡ್ ಒಳಗಿದ್ದ 8 ಬೈಕ್‌ಗಳನ್ನು ಕಿಡಿಗೇಡಿ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಬಳಿ ನಸುಕಿನ ಜಾವ ನಡೆದಿದೆ. ಕಿಡಿಗೇಡಿಯ ದುಶ್ಕೃತ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ..
ದೊಡ್ಡಬಳ್ಳಾಪುರದ ಶ್ರೀನಗರ ರೈಲ್ವೆ ಸ್ಟೇಷನ್ ಹಿಂಭಾಗದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ಗುತ್ತಿಗೆದಾರರಾದ ಶಿವಕುಮಾರ್ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರು ಮತ್ತು 8 ಬೈಕ್‌ಗಳು ಬೆಂಕಿಗೆ ಅಹುತಿಯಾಗಿವೆ.
ಜನವರಿ 12ರ ಮುಂಜಾನೆ 3 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಜನವರಿ 11ರ ರಾತ್ರಿ 10 ಗಂಟೆ ವೇಳೆ ಮನೆ ಹತ್ತಿರದಲ್ಲಿಯೇ ಇದ್ದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದ ಶಿವಕುಮಾರ್ ಸುಮಾರು 11 ಗಂಟೆ ಹೊತ್ತಿಗೆ ಮನೆಗೆ ವಾಪಾಸಾಗಿದ್ದರು. ಮುಂಜಾನೆ 3 ಗಂಟೆ ಹೊತ್ತಿಗೆ ಪಕ್ಕದ ಮನೆಯವರ ಕೂಗಾಟ ಕೇಳಿ ಹೊರ ಬಂದಾಗ ಮನೆ ತುಂಬ ಹೊಗೆ ಅವರಿಸಿಕೊಂಡಿತ್ತು, ಬೈಕ್ ಗಳು ಹೊತ್ತಿ ಉರಿಯುತ್ತಿದ್ದವು, ಅಕ್ಕಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ 8 ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
ಕಿಡಿಗೇಡಿಯೊಬ್ಬ ಈ ಕೃತ್ಯ ನಡೆಸಿದ್ದು, ಸಿಸಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿ ಈ ಕೃತ್ಯ ನಡೆಸಿದ್ದಾನೆ. ಆತ ಹೆಲ್ಮೆಟ್ ಧರಿಸಿದ್ದರಿಂದಾಗಿ ಆತನ ಗುರುತು ಪತ್ತೆಯಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.