ಬೆಳಗಾವಿ: ಧರ್ಮಸ್ಥಳದ ಹೆಸರು ಮುಂದಿಟ್ಟು ಬೆಲ್ಲದ್‌ಗೆ ಸಿಎಂ ಸ್ಥಾನ ತಪ್ಪಿಸಲಾಗಿತ್ತೇ..? ಬೆಲ್ಲದ್ ಅಥವಾ ಯತ್ನಾಳ್ ಅವರಿಗೆ ಸಿಗಬೇಕಿದ್ದ ಸಿಎಂ ಸ್ಥಾನ ಬೊಮ್ಮಾಯಿ ಪಾಲಿಗೆ ಒಲಿದಿದ್ದಾದರೂ ಹೇಗೆ ಎಂಬ ಚರ್ಚೆಗೆ ಹಿರಿಯ ಸ್ವಾಮೀಜಿಯವರು ಉತ್ತರ ನೀಡಿದ್ದಾರೆ. ಆದರೆ ಯಾರು ಈ ಪಿತೂರಿ ಮಾಡಿದರು ಎಂಬ ಸತ್ಯವನ್ನು ಹೇಳಲು ಶ್ರೀಗಳು ನಿರಾಕರಿಸಿದ್ದಾರೆ.
ಏನಿದು ಕಹಿ ಸತ್ಯ..?
ರಾಜ್ಯ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಸಿಎಂ ಬಿಎಸ್‌ವೈ ಸ್ಥಾನಕ್ಕೆ ಯಾರನ್ನು ನೇಮಿಸಬೇಕೆಂಬ ಬಗ್ಗೆ ಚರ್ಚೆ ನಡೆದಿತ್ತು. ಭ್ರಷ್ಟಾತೀತ, ನಿಷ್ಟೂರ ನಡೆಯ ನಾಯಕನ್ನು ಹುಡುಕಾಡುತ್ತಿದ್ದ ಆರೆಸ್ಸೆಸ್ ನಾಯಕರೂ ಅಂತಿಮವಾಗಿ ಧಾರವಾಡದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರನ್ನು ಸೂಚಿಸಿದ್ದರು. ಗುಪ್ತಚರ ಇಲಾಖೆ ನೀಡಿದ ಮಾಹಿತಿ, ಅಭಿಪ್ರಾಯಗಳನ್ನಾಧರಿಸಿ ಪ್ರಧಾನಿ ಮೋದಿ ಕೂಡಾ ಅರವಿಂದ್ ಬೆಲ್ಲದ್ ಬಗ್ಗೆ ಒಲವು ತೋರಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್ ನಡೆ ಬಗ್ಗೆ ನಿರಂತರ ಗಮನಹರಿಸಿದ್ದ ಉದಯನ್ಯೂಸ್ ಕೂಡಾ, ಬೆಲ್ಲದ್ ಅವರೇ ಸಿಎಂ ಆಗುವ ಸಾಧ್ಯತೆಗಳ ಬಗ್ಗೆ ಸುದ್ದಿ ಮಾಡಿದೆ. ಆದರೆ, ಕ್ಲೈಮ್ಯಾಕ್ಸ್ ಹಂತದಲ್ಲಿ, ನೂತನ ಆಯ್ಕೆಗಾಗಿ ಕರೆಯಲಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಮುನ್ನ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಬಸವರಾಜ್ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಿದ್ದೇ ಅಚ್ಚರಿ.
ಬಿಎಸ್‌ವೈ ಅವರ ಒತ್ತಡ ತಂತ್ರಕ್ಕೆ ತಲೆಬಾಗಿ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಿದೆ ಎಂದು ಬಿಜೆಪಿ ನಾಯಕರೇ ಹೇಳಿಕೊಂಡಿದ್ದರು.
ಶ್ರೀಗಳು ಸಿಡಿಸಿದ ‘ಕಹಿ ಸತ್ಯ’ದ ಬಾಂಬ್..
ಬಿಎಸ್‌ವೈ ಉತ್ತರಾಧಿಕಾರಿ ಆಯ್ಕೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಕಹಿಸತ್ಯವನ್ನು ರಾಜ್ಯದ ಪ್ರಭಾವಿ ಶ್ರೀಗಳು ಎಂದೇ ಹೇಳಲಾಗುತ್ತಿರುವ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಯವರು ಅನಾವರಣ ಮಾಡಿದ್ದಾರೆ. ಆರೆಸ್ಸೆಸ್ ಸಿದ್ಧಾಂತಗಳ ಬಗ್ಗೆ ಅತೀವ ಗೌರವ ಹೊಂದಿರುವ ಜಯಮೃತ್ಯುಂಜಯ ಶ್ರೀಗಳು, ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದವೇ ಅವರು ಕೈಗೊಂಡಿರುವ ಈ ಹೋರಾಟ ಕಮಲ ಪಾಳಯದಲ್ಲೂ ಸಂಚಲನ ಸೃಷ್ಟಿಸಿದೆ. ಈ ಹೋರಾಟಕ್ಕೆ ಬೊಮ್ಮಾಯಿ ಸಂಪುಟದ ಸಚಿವರೂ ಹಾಗೂ ಬಿಜೆಪಿ ಶಾಸಕರೂ ಭಾಗಿಯಾಗಿರುವುದು ವಿಶೇಷ.
ರಾಜ್ಯಾದ್ಯಂತ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್’ ಎಂಬ ಯಾತ್ರೆ ಕೈಗೊಂಡಿರುವ ಜಯಮೃತ್ಯುಂಜಯ ಶ್ರೀಗಳು, ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನೂತನ ಸಿಎಂ ಆಯ್ಕೆ ಸಂದರ್ಭದ ಸನ್ನಿವೇಶದತ್ತ ಬೆಳಕು ಚೆಲ್ಲಿದರು. ಲಿಂಗಾಯತ ಪಂಚಮಸಾಲಿ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದರೆ ಧರ್ಮಸ್ಥಳಕ್ಕೆ ಹೋಗುವುದಾಗಿ ನಾಯಕರೊಬ್ಬರು ಒತ್ತಡ ಹೇರಿದ್ದರು. ಹಾಗಾಗಿ ಬಿಜೆಪಿ ಹೈಕಮಾಡ್ ಮಣಿಯಿತು’ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ವೇಳೆ ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಅರವಿಂದ ಬೆಲ್ಲದ್ ಅವರನ್ನು ಪರಿಗಣಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬರುವವರೆಗೂ ಪಂಚನಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗವ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾಯಿತು ಎಂದು ಬೆಳವಣಿಗೆ ಬಗ್ಗೆ ಬೇಸರ ಹೊರಹಾಕಿದರು. ಆದರೆ ಒತ್ತಡ ಹಾಕಿದವರು ಯಾರು ಎಂಬ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದರು.
ಬಿಜೆಪಿ ಪಡಸಾಲೆಯಲ್ಲೇ ಈ ಕುರಿತು ಮಾತುಗಳು ಹರಿದಾಡಿದ್ದು, ಅದಕ್ಕೆ ಶ್ರೀಗಳ ಮಾತುಗಳೂ ಪುಷ್ಟಿ ನೀಡಿದೆ.