ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಬರುವ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಕುರಿತ ಅಧಿಕಾರಿಗಳ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಶಾಸಕರೂ ಆದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಯಾವುದೇ ಅತುರದ ನಿರ್ಧಾರ ಕೈಗೊಳ್ಳಬಾರದೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ರಮೇಶ್ ಬಾಬು ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ. ಹಿಂದುಳಿದ ವರ್ಗಗಳ, ಅಲೆಮಾರಿ ಮತ್ತು ಬುಡಕಟ್ಟು ಜನಾಂಗಗಳ ಅಧ್ಯಯನಕ್ಕಾಗಿ, ವಿಶೇಷವಾಗಿ ಹಿಂದುಳಿದ ವರ್ಗಗಳ ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಮತ್ತು ಅವುಗಳ ಪರಿಹಾರಕ್ಕಾಗಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಇದೀಗ ಈ ಸಂಸ್ಥೆಯನ್ನು ಮುಚ್ಚುವಂತೆ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಶಿಫಾರಸ್ಸನ್ನು ತಿರಸ್ಕರಿಸಬೇಕೆಂದು ರಮೇಶ್ ಬಾಬು ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿರುವ ಅವರು, ಒಂದು ವೇಳೆ ಆತುರದ ನಿರ್ಧಾರ ಕೈಗೊಂಡರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.
- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಅಡಿಯಲ್ಲಿ ಬರುವ ದೇವರಾಜ ಅರಸು ಸಂಶೋಧನಾ ಸಂಸ್ಥೆ 1992ರಲ್ಲಿ ಸ್ಥಾಪನೆಯಾಗಿದ್ದು, ಹಿಂದುಳಿದ ವರ್ಗಗಳ, ಅಲೆಮಾರಿ ಮತ್ತು ಬುಡಕಟ್ಟು ಜನಾಂಗಗಳ ಅಧ್ಯಯನಕ್ಕಾಗಿ, ವಿಶೇಷವಾಗಿ ಹಿಂದುಳಿದ ವರ್ಗಗಳ ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಮತ್ತು ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಮುದಾಯಗಳಿಗಾಗಿ ಯೋಜನೆಗಳನ್ನು ರೂಪಿಸುವುದು, ಪ್ಲಾನ್ ಮಾನಿಟರಿಂಗ್, ವರ್ಕ್‍ಷಾಪ್, ಮೌಲ್ಯಮಾಪನಗಳನ್ನು ಮಾಡುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ತುಲನಾತ್ಮಕ ಅಧ್ಯಯನ ಮಾಡುವುದು ಮೂಲ ಧ್ಯೇಯೋದ್ದೇಶವಾಗಿದೆ.
- ಕರ್ನಾಟಕ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಅಕ್ಟೋಬರ್ ತಿಂಗಳ ವಿವಿಧ ಇಲಾಖೆಗಳ ಸಭೆಯಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ತೀರ್ಮಾನ ತೆಗೆದುಕೊಂಡಿದ್ದು, ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದೊಂದು ಹಿಂದುಳಿದ ವರ್ಗಗಳನ್ನು ಮತ್ತು ಹಿಂದುಳಿದ ಜಾತಿಗಳನ್ನು ಕಡೆಗಣಿಸುವ ಕ್ರಮವಾಗಿದ್ದು, ಅಭಿವೃದ್ಧಿ ಆಯುಕ್ತರ ಶಿಫಾರಸ್ಸು ರಾಜ್ಯದ ಹಿಂದುಳಿದ ವರ್ಗಗಳನ್ನು ಸಮಾಜದ ಪ್ರಗತಿಯ ವಾಹಿನಿಯಿಂದ ಕೈಬಿಡುವ ದುರುದ್ದೇಶದಿಂದ ಕೂಡಿರುತ್ತದೆ. ಕರ್ನಾಟಕದಲ್ಲಿ ತಮ್ಮ ನಾಯಕತ್ವದಲ್ಲಿ ಸರ್ಕಾರ ರಚನೆಗೊಂಡ ಒಂದು ತಿಂಗಳ ಒಳಗೆ, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡುವುದರ ಮೂಲಕ, ತಮ್ಮ ಸರ್ಕಾರ ರಾಜ್ಯದ ಹಿಂದುಳಿದ ವರ್ಗಗಳ ವಿರುದ್ಧವೆಂಬ ಸಂದೇಶವನ್ನು ಕೊಡಲು ಹೊರಟಿರುತ್ತಾರೆ.
- ಸರ್ಕಾರಿ ಆದೇಶ ಸಂಖ್ಯೆ ಹಿಂವಕ 106 ಬಿಸಿಎ 2013 ದಿನಾಂಕ 17-04-2013ರ ಅನ್ವಯ ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ರಾಜ್ಯಮಟ್ಟದವರೆಗೆ ವಿಸ್ತರಿಸಲಾಗಿದ್ದು, ಸದರಿ ಇಲಾಖೆಯ ಮುಖ್ಯಸ್ಥರಾಗಿ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಸಂಸ್ಥೆಗೆ ಬಜೆಟ್ ಮುಖಾಂತರ ವಾರ್ಷಿಕ ಅನುದಾನಗಳನ್ನು ಹೆಚ್ಚಿಸಿ, ಹಿಂದುಳಿದ ವರ್ಗಗಳ, ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಜನಾಂಗಗಳ ಅದರಲ್ಲೂ ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಯನ್ನು ಸಾಧಿಸಬೇಕಾಗಿರುತ್ತದೆ. ಈ ಸಂಸ್ಥೆಯು ಹಿಂದುಳಿದ ವರ್ಗಗಳ, ಜಾತಿಗಳ ಅಧ್ಯಯನದ ಜೊತೆಗೆ ಮಹಿಳಾ ಸಬಲೀಕರಣ ಹಾಗೂ ವಿದ್ಯಾರ್ಥಿಗಳಿಗೆ ಕಲ್ಯಾಣ ಕಾರ್ಯಕ್ರಮಗಳ ನಡೆಸುತ್ತಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಸಹಯೋಗದೊಂದಿಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಸ್ಥೆಯನ್ನು ಮುಚ್ಚುವ ಹುನ್ನಾರದಲ್ಲಿ ಶೋಷಿತ ವರ್ಗಗಳನ್ನು ಮತ್ತಷ್ಟು ಅವನತಿಗೆ ತಳ್ಳುವ ದುರುದ್ದೇಶವಿರುತ್ತದೆ.
- ರಾಜ್ಯ ಸರ್ಕಾರವು ಕೂಡಲೇ ಮಧ್ಯ ಪ್ರವೇಶ ಮಾಡಿ, ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡಿರುವ ಅಭಿವೃದ್ಧಿ ಆಯುಕ್ತರ ತೀರ್ಮಾನವನ್ನು ಹಿಂದಕ್ಕೆ ಪಡೆದು, ಇಂತಹ ತಪ್ಪು ತೀರ್ಮಾನಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇನೆ. ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಯಾವುದೇ ಕ್ರಮ ರಾಜ್ಯದ ಹಿಂದುಳಿದ ವರ್ಗಗಳ ವಿರೋಧಿ ನೀತಿಯಾಗಿದ್ದು, ರಾಜ್ಯ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಅಥವಾ ಅಧಿಕಾರಿಗಳ ತಪ್ಪಿಗಾಗಿ ಹಿಂದುಳಿದ ವರ್ಗಗಳ ನೇತಾರ ಶ್ರೀ ದೇವರಾಜ ಅರಸರ ಹೆಸರಿಗೆ ಕಳಂಕ ತರದೇ ಸಂಶೋಧನಾ ಸಂಸ್ಥೆಯನ್ನು ಉಳಿಸಿಕೊಳ್ಳಬೇಕಿದೆ.