ದಾವಣಗೆರೆ: ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ 3 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶ ನಾಡಿನ ಗಮನ ಸೆಳೆಯಿತು.ಬೀ ಸಮಾರಂಭಕ್ಕೆ ಜನಸಾಗರವೇ ಹರಿದುಬಂತು.
ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವರಾದ ರಮೇಶ್ ಜಾರಕಿಹೊಳಿ, ಶ್ರೀರಾಮುಲು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಚಲನಚಿತ್ರ ನಟ ಸುದೀಪ್ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಜನಜಾಗೃತಿ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಮಾವೇಶದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಮಾಜದಲ್ಲಿ ಜಾಗೃತಿ ನಿರ್ಮಾಣ ಮತ್ತು ಸಬಲ ಸಂಘಟನೆಯ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಂಡಿದ್ದು, ನ್ಯಾಯಸಮ್ಮತವಾಗಿ ಸವಲತ್ತುಗಳನ್ನು ಪಡೆಯಲು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾದ ಸಂದರ್ಭ ಇದಾಗಿದೆ ಎಂದರು.
ನಾಯಕ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ದಿಸೆಯಲ್ಲಿ ಸಾಂಘಿಕ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದವರು ಹೇಳಿದರು.
ಅಂಬೇಡ್ಕರ್ ಅವರು ಹೇಳಿದಂತೆ ಜಾಗೃತಿ ಮತ್ತು ಸಂಘಟನೆ, ಎರಡೂ ಸಮುದಾಯವನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ನಮ್ಮ ನಾಯಕ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದೆ. ನಮ್ಮ ವಿಭಿನ್ನ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಲಾಗುತ್ತಿದೆ. ಸಮಾವೇಶಗಳ ಮೂಲಕ ಜನಜಾಗೃತಿ ಉಂಟುಮಾಡಲಾಗುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಪಾಳೇಗಾರರಾಗಿ, ರಾಜರಾಗಿ ಅಧಿಕಾರದಲ್ಲಿ ಧೀಮಂತರೆನಿಸಿಕೊಂಡ ಅನೇಕ ಸಾಹಸಿಗಳು ನಮ್ಮ ಜನಾಂಗದವರಾಗಿದ್ದಾರೆ. ನಮ್ಮ ಜನಾಂಗ ಶೌರ್ಯ ಮತ್ತು ಸಾಹಸಗಳಿಗೆ ಹೆಸರುವಾಸಿಯಾಗಿದೆ. ನಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ನಮ್ಮ ಗುರುಪೀಠ ಮತ್ತು ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಹಿಂದಿನ ಗುರುಗಳಾದ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸ್ಥಾಪಿಸಲಾದ ಈ ಮಠ, ಇಂದು ನಾಡಿನ ಪ್ರಮುಖ ಮಠವಾಗಿ ಬೆಳೆದಿದೆ. ನಮ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರೀ ಮಠ ಶ್ರಮಿಸುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಕರ್ನಾಟಕದಲ್ಲಿ ಕೊಡಗಿನಿಂದ ಕೋಲಾರದವರೆಗೆ, ಚಾಮರಾಜನಗರದಿಂದ ಬೀದರ್ ವರೆಗೆ ನಮ್ಮ ಸಮಾಜ ಬೇರೂರಿದೆ. ಸಾಂಘಿಕ ಹೋರಾಟದಿಂದ ಸಮಾಜದಲ್ಲಿ ಜಾಗೃತಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಸಮುದಾಯ ನಿರ್ಣಾಯಕವಾಗಿದೆ. ಹಾಗಾಗಿಯೇ ಜನಜಾಗೃತಿ ಸಮಾವೇಶದ ಮೂಲಕ ನಮಗೆ ನ್ಯಾಯಸಮ್ಮತವಾಗಿ ದೊರಕಬೇಕಾದ ಸವಲತ್ತುಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆದಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗಂಡುಗಲಿ ಕುಮಾರರಾಮ, ಕಂಪಿಲರಾಯ, ಎಚ್ಚಮನಾಯಕ, ಮದಕರಿ ನಾಯಕ, ಹಕ್ಕ – ಬುಕ್ಕ, ವೀರ ಸಿಂಧೂರ ಲಕ್ಷ್ಮಣನಂಥಹಾ ಧೀಮಂತರ ಸಮುದಾಯದ ಪ್ರತಿನಿಧಿಗಳಾಗಿರುವ ನಾವು ಸದಾ ಜಾಗೃತರಾಗಿ, ಸಂಘಟಿತರಾದರೆ ಮಾತ್ರ ನಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.