ದಾವಣಗೆರೆ: ಮ್ಯಾಚೆಂಸ್ಟರ್ ನಗರಿ ದಾವಣಗೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಿರುಸುಗೊಂಡಿವೆ. ಈ ಕಾಮಗಾರಿಗಳಿಗೆ ವೇಗ ತುಂಬುವ ಕೆಲಸಕ್ಕಿಳಿದಿದ್ದಾರೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ.ಎ.ಬಸವರಾಜ ಅವರು ಸೋಮವಾರ ಬೆಳ್ಳಂಬೆಳಿಗ್ಗೆ ದಾವಣಗೆರೆ ನಗರ ಸಂಚಾರ ಕೈಗೊಂಡು ವಿವಿಧ ಕಾಮಗಾರಿಗಳ ಪರಿಶೀಲನೆ ಕೈಗೊಂಡರು. ದಾವಣಗೆರೆ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ , ಕರ್ನಾಟಕ ನಗರ ಮೂಲಸೌಕರ್ಯ ಹಾಗೂ ಹಣಕಾಸು ಅಭಿವೃದ್ಧಿ ಮಂಡಳಿ ವತಿಯಿಂದ ನಡೆದಿರುವ ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸಿದರು.
ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಪಾರ್ಕ್ ನಲ್ಲಿ ಜಿಮ್ ಪರಿಕರಗಳ ವೀಕ್ಷಣೆ ಜೊತೆಗೆ ವರ್ಕೌಟ್ ಮಾಡುವ ಮೂಲಕ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಬಸವರಾಜ ಅವರು ಗಮನಸೆಳೆದರು.
ಶಾಸಕ ಎಸ್. ಎ.ರವೀಂದ್ರನಾಥ, ಪಾಲಿಕೆ ಮೇಯರ್ ಅಜಯ್ ಕುಮಾರ್, ಆಯುಕ್ತರು, ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.