ಬೆಂಗಳೂರು: ದತ್ತಪೀಠದ ವಿಚಾರದಲ್ಲಿ ನಮ್ಮ ಸರಕಾರ- ನಮ್ಮ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಈ ಸಂಬಂಧ ಸೂಕ್ತ ಕ್ರಮ ಕೈಗೊಂಡಿರುವ ಸಿಎಂ ಬೊಮ್ಮಾಯಿ .ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂಧೀಗೆ ಮಾತನಾಡುದ ಅವರು 10 ದಿನಗಳ ಹಿಂದೆ ನ್ಯಾಯಾಲಯದ ಆದೇಶ, ಅದರ ಅನುಗುಣವಾಗಿ ಸಂಪುಟ ಉಪ ಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸುಗಳನ್ನು ಅಂಗೀಕರಿಸಿ ಸರಕಾರವು ಆಡಳಿತ ಮಂಡಳಿ ರಚಿಸಿದೆ. ಹಿಂದೂ ಅರ್ಚಕರ ನೇಮಕಕ್ಕಿದ್ದ ಅಡೆತಡೆ ಈಗ ನಿವಾರಣೆಯಾಗಿದೆ; ಹಿಂದೂ ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ದತ್ತ ಜಯಂತಿ 4-5 ದಶಕಗಳ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಉಪಸಮಿತಿಗೆ ಧನ್ಯವಾದಗಳು ಎಂದು ತಿಳಿಸಿದರು.
ಸರಕಾರಿ ದಾಖಲೆಗಳ ಪ್ರಕಾರ ಉಳುವವನೇ ಹೊಲದೊಡೆಯ ಮಸೂದೆಗೆ ಮುಂಚೆ ದತ್ತಾತ್ರೇಯ ದೇವರ ಹೆಸರಿನಲ್ಲಿ 1,861 ಎಕರೆ ಜಾಗ ಇತ್ತು. ಕಾಂಗ್ರೆಸ್ ಆಡಳಿತವಿದ್ದಾಗ ದತ್ತಾತ್ರೇಯ ದೇವರ ಹೆಸರಿನ ಜಮೀನನ್ನು ಗೇಣಿದಾರರೂ ಅಲ್ಲದವರಿಗೆ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಮಂಜೂರು ಮಾಡಿದ್ದರೆಂದು ಮಾಹಿತಿ ಮೇಲ್ನೋಟಕ್ಕೆ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮಂಜೂರಾತಿ ರದ್ದು ಮಾಡಲು ಆಗ್ರಹಿಸುತ್ತೇನೆ ಎಂದರು.
ಕಾಂಗ್ರೆಸ್ ವಿರೋಧದ ಹಿಂದೆ ಮತೀಯ ಓಲೈಕೆ ಜೊತೆಗೇ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ ಆಸ್ತಿ ಹೊಡೆಯುವ ಸಂಚು ಇತ್ತು. ಮತ್ತೆ ದತ್ತಾತ್ರೇಯ ದೇವರ ಹೆಸರಿಗೆ ಜಮೀನು ಕಾಯ್ದಿರಿಸಲು ಒತ್ತಾಯ ಮಾಡುವುದಾಗಿ ತಿಳಿಸಿದರು. ಈ ಸಮಗ್ರ ತನಿಖೆಗಾಗಿ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ರಚಿಸಲು ವಿನಂತಿಸಿದರು.
ಹಿಂದೆ ಸುಪ್ರೀಂ ಕೋರ್ಟ್ ದತ್ತ ಪೀಠದ ವಿಚಾರದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರಕಾರಕ್ಕೆ ವಹಿಸಿತ್ತು. ಆದರೆ, ಸಿದ್ದರಾಮಯ್ಯ ಸರಕಾರವು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಇದು ಸೂಕ್ಷ್ಮ ವಿಚಾರ ಎಂದಿದ್ದರು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಂಡಿದ್ದರು. ಹಿಂದೂ ಅರ್ಚಕರ ನೇಮಕಾತಿ ತಿರಸ್ಕರಿಸಿದ ಸಿದ್ದರಾಮಯ್ಯ ಅವರದು ಯಾವ ಸೀಮೆ ಜಸ್ಟಿಸ್, ಇನ್ಸಾನಿಯತ್ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಕಾಲ ಮುಗಿದಿದೆ. ನಿಮ್ಮ ಓಲೈಕೆ ನೀತಿಯ ಪರಮಾವಧಿ ಅದಾಗಿತ್ತು. ಇದಕ್ಕಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.



























































