ಬೆಂಗಳೂರು: ಬೆಂಗಳೂರಿನ ಕಲ್ಯಾಣನಗರದ ಬಸವರಾಜ.ಎನ್ ಕುಂಬಾರ್ ಅವರ ಮನೆಯಂಗಳದಲ್ಲಿ ಕನ್ನಡ ಕಾರ್ಯಕ್ರಮ ಸಾಹಿತ್ಯಾಸಕ್ತರ ಹಾಗೂ ನಾಡು ನುಡಿ ಹೋರಾಟಗಾರರ ಗಮನಸೆಳೆಯಿತು.
ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ಕನ್ನಡದ ವೀರ ಮಹಿಳಾಮಣಿಗಳು ವಿಷಯದ ಕುರಿತು ಮಾತನಾಡಿದ ಕನ್ನಡ ಪರ ಚಿಂತಕ ಬಸವರಾಜ ಅರಬಗಟ್ಟ, ಸ್ತ್ರೀ ಸಮುದಾಯ ಶತ ಶತಮಾನಗಳಿಂದ ತ್ಯಾಗಮಯಿಯಾಗಿ ಅಭೂತಪೂರ್ವ ಸಾಧನೆಯನ್ನು ದೇಶ, ನಾಡು, ನುಡಿಗಾಗಿ ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಇತಿಹಾಸದ ಕೆಲವು ಘಟನೆಗಳನ್ನು ಉದಾಹರಿಸಿದರು. ಭಾರತೀಯ ಪರಂಪರೆ ಮಹಿಳೆಯರನ್ನು ಮಾತೃ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಗೌರವಿಸಿದೆ. ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಬಲಿದಾನ, ಅಕ್ಕಮಹಾದೇವಿ, ರಾಣಿ ಅಬ್ಬಕ್ಕದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಚಿಹೊನ್ನಮ್ಮ, ಚೆನ್ನಬೈರಾದೇವಿ, ಜಯದೇವಿ, ತಾಯಿ ಲಿಗಾಡೆ ಮುಂತಾದವರ ವಿವೇಕಯುತ ಚಿಂತನೆ ಹೋರಾಟ ಮತ್ತು ಕಾರ್ಯ ಸಾಧನೆಗಳನ್ನು ಹೆಣ್ಣುಮಕ್ಕಳ ದಿನವೇ ಅಲ್ಲದೆ ಪ್ರತಿದಿನ ಕೃತಜ್ಞತಾ ಭಾವದಿಂದ ಸ್ಮರಿಸೋಣ ಎಂದರು.
ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ.ಎಚ್.ಜಯದೇವ ಮಾತನಾಡಿ, ಮನೆಮನೆಯಲ್ಲಿ ಕನ್ನಡ ಬಳಕೆಯಾದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ನೂರಾರು ಮನೆಯಂಗಳದಲ್ಲಿ ಕನ್ನಡ ಕಾರ್ಯಕ್ರಮವನ್ನು ಮಾಡುತ್ತಾ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಬಿಜೆಪಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್.ಲೋಕೇಶ್ ಮಾತನಾ,ಡಿ ಮಕ್ಕಳನ್ನು ಟಿವಿ ಮೊಬೈಲ್’ನಿಂದ ದೂರ ಮಾಡಿ ಓದುವ ಹವ್ಯಾಸ ಬೆಳೆಸಿದರೆ ಮುಂದೆ ಜ್ಞಾನಿಗಳಾಗಿ ದೇಶಕ್ಕೆ ಕೊಡುಗೆ ನೀಡುತ್ತಾರೆ. ಬಿಡುವಿನ ವೇಳೆಯಲ್ಲಿ ಹೆಚ್ಚು ಕನ್ನಡ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ರವಿ ಎಂ.ಎಸ್.ಗೌಡ, ಸಾಹಿತಿ ದೇಸು ಆಲೂರು, ಟ್ರಸ್ಟ್’ನ ಗೌರವಾಧ್ಯಕ್ಷ ಕೆ ಬಸವನಗೌಡ, ಕನ್ನಡ ಸೇನೆ ಕರ್ನಾಟಕ ಖಜಾಂಚಿ ರಾಜೇಂದ್ರ ಕನ್ನೂರ, ಪಿ.ಎಸ್.ಪ್ರದೀಪ್, ಪ್ರಸನ್ನಕುಮಾರ್,ಕರ್ನಾಟಕ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಹನುಮಂತಪ್ಪ ಮೆಡೆಗಾರ್, ಟ್ರಸ್ಟ್’ನ ಪದಾಧಿಕಾರಿಗಳಾದ ಅಂಬಣ್ಣ ಮುಡಬಿ, ಶರಣಯ್ಯ ಜೇಡಿಮಠ , ಸುರೇಶ್ ಬಿರಾದಾರ್, ಬಸವರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.