ಉಡುಪಿ: ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ವಿಸ್ತರಣೆ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಸಭೆ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಕರ್ಫ್ಯೂವನ್ನು ಏಪ್ರಿಲ್ 17ರ ವರೆಗೆ ಜಾರಿಗೊಳಿಸಲಾಗಿದೆ ಎಂದರು.
ಈ ಅವಧಿ ಮುಗಿಯುವ ಎರಡು ದಿನಗಳ ಮೊದಲು ಅಂದರೆ ಮೇ 10 ರ ಸುಮಾರಿಗೆ ರಾಜ್ಯದಲ್ಲಿರುವ ಕೋವಿಡ್ ಸ್ಥಿತಿಗತಿ, ಸೋಂಕಿತರ ಸಂಖೆಯಲ್ಲಿ ಇಳಿಮುಖವಾಗಿದೆಯೇ ಎಂಬುದರ ಕುರಿತು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಿದೆ. ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಲಿದೆ. ಆ ಸಂದರ್ಭದಲ್ಲಿ ಇರುವ ವಾಸ್ತವ ಅಂಶವನ್ನು ಆಧರಿಸಿ ಆ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದರ ಪ್ರಕಾರ ಕರ್ಫ್ಯೂ ವನ್ನು ವಿಸ್ತರಣೆ ಮಾಡಬೇಕೋ, ಬೇಡವೋ ಅಥವಾ ಇನ್ನು ಯಾವುದಾದರೂ ಹೊಸ ಕ್ರಮ ಅನುಸರಿಸಬೇಕೋ ಎಂಬುದರ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.