ಬೆಂಗಳೂರು: ‘ಕರ್ನಾಟಕದಲ್ಲೂ ಬಾಂಗ್ಲಾದೇಶದಲ್ಲಿ ಹಿಂದಿನ ಪ್ರಧಾನಿಗೆ ಆದ ಗತಿಯೇ ನಡೆಯಬಹುದು ಎಂದಿದ್ದ ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ಅವರ ಹೇಳಿಕೆ ನಿಜವಾಯಿತೇ? ಇಂಥದ್ದೊಂದು ಚರ್ಚೆ ರಾಜ್ಯ ರಾಜಕಾರಣದಲ್ಲಿ ನಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ರಪಾಲರಿಗೆ ಸಲ್ಲಿಕೆಯಾಗಿರುವ ದೂರು ಗಮನಸೆಳೆದಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದಕ್ಕೆ ಉದಾಹರಣೆ ಎಂದು ಆರೋಪಿಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದೆ.
ಈ ಸಂಬಂಧ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದು, ಕೆಲವು ತಿಂಗಳ ಹಿಂದೆ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನೀಡಿರುವ ಹೇಳಿಕೆ ನಿಜವಾಗಿದೆ ಎಂದು ನೆನಪಿಸಿದೆ.
ಏನಿದು ಐವಾನ್ ವಿವಾದಿತ ಹೇಳಿಕೆ?
ಮುಡಾ ಹಗರಣ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ 19.08.2024ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು, ಅಂದು ಮಂಗಳೂರಿನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ಅವರು ‘ಕರ್ನಾಟಕದಲ್ಲೂ ಬಾಂಗ್ಲಾದೇಶದಲ್ಲಿ ಹಿಂದಿನ ಪ್ರಧಾನಿಗೆ ಆದ ಗತಿಯೇ ನಡೆಯಬಹುದು. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ’ ಎಂದು ರಾಜ್ಯಪಾಲರಿಗೆ ಬೆದರಿಕೆಯೊಡ್ಡಿದ ರೀತಿ ಹೇಳಿಕೆ ನೀಡಿದ್ದರು. ಇದೀಗ ಅದೇ ರೀತಿ ಆಡಳಿತ ಶಕ್ತಿಕೇಂದ್ರದ ಮೇಲೆ ಪುಂಡರು ದಾಳಿ ಮಾಡಿದ್ದಾರೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಾರ್ಯದರ್ಶಿ ಜಯಪ್ರಕಾಶ್ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ..
ಸಿ.ಟಿ.ರವಿ ಪ್ರಕರಣದಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಪೊಲೀಸರು ಕಾನೂನು ಮೀರಿ ವರ್ತಿಸುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಬೆಳಗಾವಿ ಘಟನೆಯನ್ನು ನೋಡಿದರೆ ಪೊಲೀಸರ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದಿರುವ ಜಯಪ್ರಕಾಶ್, ವಿಧಾನ ಮಂಡಲದ ಸದನಗಳ ಮುಖ್ಯಸ್ಥರಾಗಿರುವ ಹಾಗೂ ರಾಜ್ಯದ ಸಂವಿಧಾನ ಶ್ರೇಷ್ಠರಾಗಿರುವ ತಾವು, ಕೂಡಲೇ ಸೂಕ್ತ ಕ್ರಮ ಕೈಗೊಂಡು, ಸಂವಿಧಾನದ ವಿಧಿಯಾನುಸಾರ ಕ್ರಮವಹಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ.