ಬೆಂಗಳೂರು: ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರು ಹೇಳಿದ್ದಾರೆ.
ಕೆ.ಅರ.ಪುರ ವಿಧಾನ ಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿ ಸೇರಿದಂತೆ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿವರಿಸಿದ ಸಂದರ್ಭದಲ್ಲಿ ಮಾತನಾಡಿದ ಸದಾನಂದ ಗೌಡರು, ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.
ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥಗಳನ್ನು ಬೈರತಿ ಬಸವರಾಜ ಅವರು ವಿತರಣೆ ಮಾಡುತ್ತಿರುವುದು ನಿಜವಾಗಿಯೂ ಒಂದು ಪುಣ್ಯದ ಕೆಲಸ ಎಂದರು.
ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದು ಅಶಿಸುತ್ತೇನೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲ್ಲೆಲ್ಲ ನಾನು ಕೆ ಅರ್ ಪುರ ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ ಅವರು ಅಲ್ಲಿ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.