ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿರೋಧಕ ಲಸಿಕಾ ಅಭಿಯಾನದಲ್ಲಿ ಸರ್ಕಾರ ಅಗತ್ಯ ಬದಲಾವಣೆಯನ್ನು ಮಾಡಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ವಿತರಣೆಯ ಅಗತ್ಯ ಹಿನ್ನೆಲೆಯಲ್ಲಿ 18ರಿಂದ 45 ವರ್ಷ ವಯಸ್ಸಿನವರಿಗಾಗಿ ಘೋಷಿಸಿರುವ ಅಭಿಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಎಲ್ಲರಿಗೂ ಲಸಿಕೆ ಸಿಗುವಂತಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಲಸಿಕೆ ಆಗಮಿಸುವವರೆಗೂ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಿಎಂ ಬಿಎಸ್‌ವೈ ಸುದ್ದಿಗೋಷ್ಠಿಯ ಹೈಲೈಟ್ಸ್ ಇಲ್ಲಿದೆ
- ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. ಈ ವರೆಗೆ 1.10 ಕೋಟಿ ಡೋಸ್‍ಗಳನ್ನು ಭಾರತ ಸರ್ಕಾರ ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್ ಹಾಗೂ 10.9 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳು.
- ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರು ಕರೆಯಲಾಗಿದೆ.
- ಈ ವರೆಗೆ 7.5 ಲಕ್ಷ ಕೋವಿಶೀಲ್ಡ್ ಹಾಗೂ 1.44 ಲಕ್ಷ ಕೊವ್ಯಾಕ್ಸಿನ್ ಸೇರಿದಂತೆ 8.94 ಲಕ್ಷ ಡೋಸ್‍ಗಳು ಲಭ್ಯವಾಗಿದೆ.
- ಕೋವಿಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳು ಆರು ವಾರ ಪೂರೈಸಿದ್ದು, ಎರಡನೇ ಡೋಸ್‍ಗೆ ಅರ್ಹತೆ ಹೊಂದಿದ್ದಾರೆ. ಕೊ-ವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು 4 ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಂದರೆ ಇಂದಿನ ಅಂಕಿ ಅಂಶಗಳ ಪ್ರಕಾರ 19.97 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ.
- ಮೊದಲ ಡೋಸ್ ಪಡೆದವರು ಸಂಪೂರ್ಣ ಸುರಕ್ಷತೆ ಹೊಂದಲು ಎರಡನೇ ಡೋಸ್ ಲಸಿಕೆ ನೀಡುವುದು ಅತಿ ಅಗತ್ಯ. ಆದ್ದರಿಂದ ಲಭ್ಯವಿರುವ ಲಸಿಕೆಯ ದಾಸ್ತಾನನ್ನು ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿರುವವರಿಗೆ ನೀಡಲು ನಿರ್ಧರಿಸಿದ್ದೇವೆ. ಈ ಕಾರಣಕ್ಕಾಗಿ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಾವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ.
- ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಗಗನ್‍ದೀಪ್ ಕಾಂಗ್ ಅವರನ್ನು ರಾಜ್ಯದ ವ್ಯಾಕ್ಸಿನೇಷನ್ ಕಾರ್ಯತಂತ್ರದ ಸಲಹೆಗಾರರಾಗಿ ರಾಜ್ಯ ಸರ್ಕಾರವು ನೇಮಕ ಮಾಡುತ್ತಿದೆ. ಇವರು ವ್ಯಾಕ್ಸಿನ್‍ಗಳ ಸಂಶೋಧನೆ ಮತ್ತು ಅವುಗಳ ಬಳಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯು ರಚಿಸಿರುವ ಸಲಹಾ ಸಮಿತಿಗಳ ಸದಸ್ಯರಾಗಿರುತ್ತಾರೆ.
- ಕೇಂದ್ರ ಸರ್ಕಾರವು ರಾಜ್ಯಕ್ಕೆ ಏಪ್ರಿಲ್ 21 ರಿಂದ ಮೇ 9 ರ ಅವಧಿಗೆ 3.01 ಲಕ್ಷ ರೆಮ್‍ಡಿಸಿವಿರ್ ಹಂಚಿಕೆ ಮಾಡಿದ್ದು, ಈ ಅವಧಿಯಲ್ಲಿ 2.72 ಲಕ್ಷ ಡೋಸ್ ರೆಮ್‍ಡಿಸಿವಿರ್ ಪೂರೈಕೆಯಾಗಿದೆ. ಇಂಜೆಕ್ಷನ್ ಪೂರೈಕೆಯಲ್ಲಿ ವಿಳಂಬ ಮಾಡಿದ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೇ 10 ರಿಂದ 16ರ ಅವಧಿಗೆ 2.74 ಲಕ್ಷ ಇಂಜೆಕ್ಷನ್‍ಗಳು ಹಂಚಿಕೆಯಾಗಿದೆ. ಇವು ಸಕಾಲದಲ್ಲಿ ಪೂರೈಕೆಯಾಗುವ ಕುರಿತು ನಿರಂತರ ಪರಿಶೀಲನೆ ಹಾಗೂ ಸಮನ್ವಯ ನಡೆಸಲಾಗುತ್ತಿದೆ.
- ರಾಜ್ಯದಲ್ಲಿ ರೆಮ್‍ಡಿಸಿವಿರ್‍ಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಕೋಟಾದಲ್ಲಿ ಬಳಕೆಯಾಗದೆ ಉಳಿದ ಇಂಜೆಕ್ಷನ್‍ಗಳನ್ನು ಪೂರೈಸುವಂತೆಯೂ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
- ಖಾಸಗಿ ಆಸ್ಪತ್ರೆಗಳ ಬೇಡಿಕೆ ಪರಿಶೀಲಿಸಿ, ಸಮಾನವಾಗಿ ಹಂಚಿಕೆ ಮಾಡಲು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ.
- ರಾಜ್ಯದಲ್ಲಿ ಕೋವಿಡ್ 19ರ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಾಗಿ ನಾರಾಯಣ ಹೆಲ್ತ್‍ನ ಛೇರ್‍ಮನ್ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗುವುದು.
- ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ.
- ಜನತೆ ಎಲ್ಲ ನಿರ್ಬಂಧಗಳನ್ನೂ ಮುಕ್ತವಾಗಿ ಸ್ವೀಕರಿಸಿ ಅನುಸರಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಆದ್ದರಿಂದ ರಾಜ್ಯದ ಜನತೆ ಸಹಕರಿಸಲು ಕೋರಿದೆ.