ಬೆಂಗಳೂರು: ಮಾರಣಾಂತಿಕ ಕೊರೋನಾ ಹಾವಳಿ ಸಮಾಜವನ್ನು ಆವರಿಸಿಕೊಂಡಿದ್ದು, ಸೋಂಕು ನಿವಾರಣೆ ಸಂಬಂಧ ನಾಡಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಶ್ವದಲ್ಲಿ ಕೊರೊನಾ ಎರಡು ಅಲೆಗಳಿಂದ ಸಾಕಷ್ಟು ಜನರ ಜೀವ ಹಾನಿಯಾಗಿದೆ. ಈಗ ಮೂರನೆ ಅಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಾಯ ಪಟ್ಟಿದ್ದಾರೆ. ಹಾಗಾಗಿ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವರ್ಗದ ದೇವಸ್ಥಾನಗಳಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 15 ರಂದು ಎಲ್ಲ ಜನರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲು ಎಲ್ಲ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಹಿಂದು ಧರ್ಮ ಶಾಸ್ತ್ರ ಪುರಾಣದಲ್ಲಿ ವಿಜಯದಶಮಿಯನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಇದು ದುಷ್ಟ ಶಕ್ತಿಯನ್ನು ಸಂಹರಿಸಿ ವಿಜಯವನ್ನು ಆಚರಿಸುವ ದಿನ. ಆದ್ದರಿಂದ ಈ ದಿನ ಶ್ರೀ ಭಗವತಿ ಮತ್ತು ಭಗವಂತನನ್ನು ವಿಶೇಷವಾಗಿ ಪ್ರಾರ್ಥಿಸಿ ಪೂಜಿಸಿದರೆ. ವಿಶೇಷ ಫಲ ಹೊಂದ ಬಹುದೆಂದು ಶಾಸ್ತ್ರ ವಿಧಿತವಾಗಿದೆ ಎಂದರು.
ಭಕ್ತರ ನಂಬಿಕೆಯೂ ಅದೇ ಆಗಿರುವುದರಿಂದ ಪ್ರಾಕೃತಿಕವಾಗಿ ಯಾರಿಗೂ ದಷ್ಪರಿಣಾಮ ಆಗದಂತೆ ವಿಜಯ ದಶಮಿಯ ದಿನ ಅಕ್ಟೋಬರ 15 ರಂದು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕೊರೊನಾ ಸಂಕಟ ದೂರ ಮಾಡಿ ಜನತೆಯ ಆರೋಗ್ಯ ಕಾಯುವಂತೆ ವಿಶೇಷ ಪೂಜೆ ನೆರವೇರಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಪ್ರವೇಶಕ್ಕೆ ಡ್ರೆಸ್ ಕೋಡ್ ಮಾಡುವ ಬಗ್ಗೆ ನನ್ನ ಮುಂದೆ ಯಾವುದೆ ಪ್ರಸ್ತಾಪ ಬಂದಿಲ್ಲ. ಧಾರ್ಮಿಕ ಪರಿಷತ್ ನಲ್ಲಿ ಚರ್ಚೆಯಾಗಿದ್ದರೆ ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುವುದು ಎಂದರು.