ಬೆಂಗಳೂರು: ದೇಶದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಮತ್ತಷ್ಟು ವೇಗದಲ್ಲಿದೆ. ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದಲ್ಲೂ ಆತಂಕದ ಅಲೆ ಎದ್ದಿದೆ. ಅದರಲ್ಲೂ ಬೆಂಗಳೂರನ್ನು ಕೆಂಪು ವಲಯ ಎಂದು ಕೇಂದ್ರ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿಯಮ ಜಾರಿ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ನಡುವೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ಕುತೂಹಲದ ಕೇಂದ್ರ ಬಿಂದುವಾಯಿತು. ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು.
ಈ ನಡುವೆ, ಪರಿಸ್ಥಿತಿ ಹದಗೆಟ್ಟರೆ ಲಾಕ್‌ಡೌನ್ ಅನಿವಾರ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಕೂಡಾ ಸಲಹೆ ಮಾಡಿರುವ ಬೆಳವಣಿಗೆ ಕೂಡಾ ರಾಜ್ಯದಲ್ಲಿ ಕಠಿಣ ನಿಯಮ ಜಾರಿಯ ಅನಿವಾರ್ಯತೆಯತ್ತ ಬೆಳಕು ಚೆಲ್ಲುವಂತಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಕೂಡಾ ಇದೇ ರೀತಿಯ ಸುಳಿವು ನೀಡಿದರು.
ಜನ ನಿರ್ಲಕ್ಷ್ಯ ವಹಿಸಿದರೆ ಮುಂಬೈ, ದೆಹಲಿ, ಪಶ್ಚಿಮ ಬಂಗಾಳದಂತೆ ಲಾಕ್‌ಡೌನ್ ರೀತಿ ಕಠಿಣ ನಿಯಮ ಜಾರಿಯಾಗಬಹುದು ಎಂದರು. ಕೋವಿಡ್ ಮೂರನೇ ಅಲೆ ಬಗ್ಗೆ ಸಿಎಂ ಮತ್ತೊಮ್ಮೆ ಸಭೆ ನಡೆಸಲಿದ್ದಾರೆ ಎಂದರು. ಕೇಂದ್ರ ಸರ್ಕಾರವೂ ಬೆಂಗಳೂರನ್ನು ರೆಡ್ ಜೋನ್ ಎಂದು ಗುರುತಿಸಿದೆ. ಹಾಗಾಗಿ ಸಿಎಂ ಅವರು ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಮಾಡಬಹುದು ಎಂದು ಸಚಿವ ಅಶೋಕ್ ಹೇಳಿದರು.