ಚಿಕ್ಕಮಗಳೂರು: ಇಹಲೋಕ ತ್ಯಜಿಸಿದವರ ಆತ್ಮಕ್ಕೆ ಮೋಕ್ಷ ಸಿಗಲೆಂದು ಕೈಂಕರ್ಯ ನಡೆಸುವುದು ನಮ್ಮ ನಾಡಿನ ಒಂದು ಸಂಪ್ರದಾಯ. ಪುನರ್ಜನ್ಮದ ಬಗ್ಗೆ ನಂಬಿಕೆ ಇರುವ ಆಸ್ತಿಕರು ವಿಧಿವಶರಾದ ಬಂಧುಗಳ ಅಸ್ತಿ ವಿಸರ್ಜನೆ ಮಾಡುವ ಕೈಂಕರ್ಯವನ್ನು ಅನುಸರಿಸುತ್ತಾರೆ. ಇಂಥದ್ದೊಂದು ಅನನ್ಯ ಕೈಂಕರ್ಯದ ಸನ್ನಿವೇಶಕ್ಕೆ ಚಿಕ್ಕಮಗಳೂರು ಇಂದು ಸಾಕ್ಷಿಯಾಯಿತು. ಇಲ್ಲಿ ಮೃತರಿಗೆ ಶಾಸಕರು, ಸಂಸದರೇ ಬಂಧುಗಳೆನಿಸಿದರು.
ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟು, ಕೊನೆಯ ಕ್ರಮಗಳು ನಡೆಯದೇ ಇದ್ದಂತಹ ಚಿಕ್ಕಮಗಳೂರು ಜಿಲ್ಲೆಯ ನಾನಾ ಭಾಗದ 46 ಸಂತ್ರಸ್ತರ ಅಸ್ತಿಗಳನ್ನು ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವತಿಯಿಂದ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಖಾಂಡ್ಯದ ಶ್ರೀ ಮಾರ್ಕಂಡೇಶ್ವರ ದೇವಾಲಯದ ಬಳಿ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ಸಂಸದೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಶಾಸಕ ಸಿ.ಟಿ ರವಿ, ಶೃಂಗೇರಿ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಕಲ್ಮರಡಪ್ಪ ಹಾಗೂ ಪಕ್ಷದ ಹಿರಿಯರು ಉಪಸ್ಥಿತಿಯಲ್ಲಿ ಈ ಕೈಂಕರ್ಯ ನೆರವೇರಿತು.