ಹಾವೇರಿ: ಇದು ಆಸ್ಪತ್ರೆಯಲ್ಲ. ಮನೆಯ ಎಂದು ಭಾವಿಸಿ. ಇಲ್ಲಿ ವೈದ್ಯರು ನಿಮ್ಮ ಆರೋಗ್ಯ ವಿಚಾರಣೆ ಮಾಡುತ್ತಾರೆ. ಸೋಂಕಿತರಿಗೆ ಮಾತ್ರೆ ನೀಡುತ್ತಾರೆ. ಆಕ್ಸಿಜನ್ ವ್ಯವಸ್ಥೆ ಇದೆ. ಮೂರು ಹೊತ್ತು ಊಟದ ವ್ಯವಸ್ಥೆ ಇರುತ್ತದೆ. ನಿಶ್ಚಿಂತೆಯಿಂದ ಗುಣಮುಖರಾಗಿ ಮನೆಗೆ ತೆರಳಿ. ಇದು ತಮ್ಮ ಮನೆಯ ಆವರಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಮಾತುಗಳು.
ಶಿಗ್ಗಾವಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಹ್ಲಾದ್ ಜೋಶಿ ಅವರೊಂದಿಗೆ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಬಸವರಾಜ್ ಬೊಮ್ಮಾಯಿ ತಮ್ಮ ಮನೆಯಲ್ಲಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಉದ್ದೇಶಿಸಿ ಮಾತನಾಡಿದರು.

ಸದ್ಯಕ್ಕೆ 15 ಜನ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಹಣ್ಣು ಹಂಪಲು ನೀಡಲಾಗುತ್ತದೆ. ಶುಚಿತ್ವಕ್ಕೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಖಾಸಗಿ ವೈದ್ಯರು ಸೋಂಕಿತರ ತಪಾಸಣೆಗೆ ಬರುತ್ತಾರೆ. ಸರ್ಕಾರಿ ವೈದ್ಯರಿಗೂ ಸಹ ನಾನು ಮನವಿ ಮಾಡಿದ್ದೇನೆ. ಅವರು ಕೂಡ ಇಲ್ಲಿಗೆ ಭೇಟಿ ನೀಡಿ ವೈದ್ಯೋಪಚಾರ ನೀಡಲಿದ್ದಾರೆ. ದಿನದ 24 ಗಂಟೆಗಳ ಕಾಲ ನರ್ಸುಗಳು ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಸೋಂಕಿತರಿಗೆ ಮಾತ್ರೆ ಮತ್ತು ಔಷಧಿಯನ್ನು ನೀಡಲಾಗುತ್ತಿದೆ. ಹಾಗಾಗಿ ಕೋವಿಡ್ ಸೋಂಕಿತರಿಗೆ ಇಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಎದುರಾಗಬಹುದಾದ 3ನೇ ಅಲೆಯನ್ನು ಎದುರಿಸಲು ನಾವು ಈಗಲೇ ಸಜ್ಜಾಗಬೇಕಾಗಿದೆ. ಹೀಗಾಗಿ ಆಕ್ಸಿಜನ್ ಜನರೇಟರುಗಳು ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಶಿಗ್ಗಾವಿ, ಹಾನಗಲ್, ಹಾವೇರಿ ತಾಲೂಕಿನಲ್ಲಿ ಸರ್ಕಾರದ ವತಿಯಿಂದ ಆಕ್ಸಿಜನ್ ಜನರೇಟರ್ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. ಹಿರೇಕೆರೂರು ಮತ್ತು ಬ್ಯಾಡಗಿಯಲ್ಲಿ ಆಕ್ಸಿಜನ್ ಜನರೇಟರ್ ಸ್ಥಾಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸವಣೂರು ಮತ್ತು ರಾಣೆಬೆನ್ನೂರಿನಲ್ಲಿ ಸಿಎಸ್ಆರ್ ಫಂಡ್ ನಲ್ಲಿ ಆಕ್ಸಿಜನ್ ಜನರೇಟರ್ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಹಾವೇರಿ ಜಿಲ್ಲೆಗೆ ಈಗ 6.5 ಮೆ ಟನ್ ಆಕ್ಸಿಜನ್ ಸರಬರಾಜಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ಇದನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಮಹಾರಾಷ್ಟ್ರಕ್ಕೆ ಪೂರೈಕೆ ಯಾಗಿರುವ ಆಕ್ಸಿಜನ್ ನಲ್ಲಿ 75 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕರ್ನಾಟಕಕ್ಕೆ ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರಣೀಭೂತರು. ಅದರಲ್ಲಿ 10 ಮೆಟ್ರಿಕ್ ಟನ್ ಆಕ್ಸಿಜನ್ ಹಾವೇರಿಗೆ ಬರಲಿದೆ ಎಂದು ಸಂತಸದ ಸುದ್ದಿಯನ್ನು ತಿಳಿಸಿದರು.
ನನ್ನ ಮನೆಯ ಆವರಣದಲ್ಲಿ ಕೋವಿಡ ಕೇರ್ ಸೆಂಟರ್ ಮಾಡಿದ್ದು ನನ್ನ ಕ್ಷೇತ್ರದ ಜನತೆಗೆ ನಾನು ಮಾಡುತ್ತಿರುವ ಅಳಿಲು ಸೇವೆ. ಕಷ್ಟಕಾಲದಲ್ಲಿ ನಮ್ಮ ಜನರ ಕೈಹಿಡಿಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು. ಈ ಕೇಂದ್ರ ಸ್ಥಾಪನೆಗೆ ನನಗೆ ಸಿದ್ದೇಶ್ವರ ಸ್ವಾಮೀಜಿಗಳು ಪ್ರೇರಣೆ. ಈ ಮನೆ ಮುಂದಿನ ದಿನಗಳಲ್ಲಿ ಜನರಿಗೆ ಉಪಯೋಗವಾಗಲಿದೆ ಎಂದು ಸಿದ್ದೇಶ್ವರ ಸ್ವಾಮಿಗಳು ಹೇಳಿದ್ದರು. ಅದರಂತೆ ಈಗ ಮನೆ ಕ್ಷೇತ್ರದ ಜನತೆಯ ಬಳಕೆಗೆ ಉಪಯೋಗವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.





















































