ಬೆಂಗಳೂರು: ರಾಜ್ಯಕ್ಕೆ ಮೊದಲ ಹಂತದಲ್ಲಿ ಪೂರೈಕೆಯಾಗಿರುವ ಕೊರೊನಾ ಲಸಿಕೆಯ 7.95 ಲಕ್ಷ ವೈಲ್’ಗಳು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆಗೆ ಸುರಕ್ಷಿತ ವ್ಯವಸ್ಥೆಯಾಗಿದೆ.
ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಗಿ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗುತ್ತಿದೆ.
ಪ್ರತಿ ಡೋಸ್ ನಲ್ಲಿ 0.5 ಎಂಎಲ್ ಪ್ರಮಾಣವಿರುತ್ತದೆ. ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ
ಇದು ಮಾರಾಟಕ್ಕಲ್ಲ ಎಂದು ಲಸಿಕೆಯ ವೈಲ್ ನಲ್ಲಿ ಬರೆಯಲಾಗಿದೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೊನಾ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.