ದೆಹಲಿ: ದೇಶಾದ್ಯಂತ ಮರಣಮೃದಂಗ ಭಾರಿಸುತ್ತಿರುವ ಕೊರೋನಾ ಸೋಂಕಿನ ಪ್ರಮಾಣ ಇದೀಗ ಲಾಕ್‌ಡೌನ್ ಪರಿಣಾಮವಾಗಿ ಕಡಿಮೆಯಾಗುತ್ತಿದೆ. ಕೋವಿಡ್ ಎರಡನೇ ಅಲೆ ಇದಾಗಿದ್ದು ಇನ್ನೆರಡು ತಿಂಗಳಲ್ಲಿ ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಆದರೆ ಸದ್ಯವೇ ಮತ್ತೊಂದು ಅಲೆ ತಲ್ಲಣದ ತರಂಗ ಎಬ್ಬಿಸುವ ಆತಂಕ ಇದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಜುಲೈ ವೇಳೆಗೆ ಈಗಿರುವ ಸೋಂಕಿನ ಅಲೆ ನಿಯಂತ್ರಣಕ್ಕೆ ಬರಲಿದೆ, ಅನಂತರ ಮೂರನೇ ಅಲೆ ಪ್ರಬಲವಾಗಿ ಎದುರಾಗಲಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞ ಸಮಿತಿ ತಿಳಿಸಿದೆ. 6-8 ತಿಂಗಳ ಅವಧಿಯಲ್ಲಿ 3ನೇ ಅಲೆ ಭಾರೀ ಆತಂಕಕಾರಿ ಪರಿಸ್ಥಿತಿಗೆ ಕಾರಣವಾಗಬಹುದು. ಹಾಗಾಗಿ ಅಷ್ಟರಲ್ಲಿ ಲಸಿಕೆ ಅಭಿಯಾಣ ಪರಿಣಾಮಕಾರಿ ಆಗಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಕೊರೋನಾ ಲಸಿಕೆಯು ಪರಿಣಾಮಕಾರಿಯಾಗಿದ್ದು, 2 ಬಾರಿ ಲಸಿಕೆ ಹಾಕಿಸಿಕೊಂಡಲ್ಲಿ ಶೇ.99ರಷ್ಟು ಆತಂಕಪಡುವ ಅಗತ್ಯವಿಲ್ಲ. ಆದರೆ ಈಗಾಗಲೇ ಹೆಚ್ಚಿನ ಪ್ರಮಾದಲ್ಲಿ ಸೋಂಕು ವರದಿಯಾಗುತ್ತಿರುವ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಝಾರ್ಖಂಡ್, ರಾಜಸ್ಥಾನ, ಕೇರಳ, ಉತ್ತರಾಖಂಡ, ಗುಜರಾತ್, ಹರಿಯಾಣ, ದೆಹಲಿ, ಗೋವಾದಲ್ಲಿ ರಾಜ್ಯಗಳು ಎಚ್ಚರಿಕೆ ವಹಿಸಬೇಕಿದೆ ಎಂಬ ಅಭಿಪ್ರಾಯ ತಜ್ಞರದ್ದು.