ಬೆಂಗಳೂರು: ಕೊರೋನಾ ರೂಪಾಂತರಗೊಂಡಿದ್ದು ಈ ವೈರ್ಸ್ ರಾಜ್ಯಕ್ಕೂ ಕಾಲಿಟ್ಟಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಗಮಿಸುವವರನ್ನು ಕ್ವಾರಂಟೈನ್’ಗೊಳಪಡಿಸಲು ರಾಜ್ಯಸರ್ಕಾರ ಕ್ರಮಕೈಗೊಂಡಿದೆ.
ನವೆಂಬರ್ 25 ರಿಂದ ಡಿಸೆಂಬರ್ 22 ರವರೆಗೆ ರಾಜ್ಯಕ್ಕೆ ಯು.ಕೆ.ಯಿಂದ ಬಂದವರ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ಇರಿಸಲಿದ್ದಾರೆ. ಯು.ಕೆ.ಯಿಂದ ಬಂದವರು ಕಡ್ಡಾಯವಾಗಿ 28 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಲೇಬೇಕಿದೆ. ಮೊದಲ 14 ದಿನಗಳ ಕಾಲ ಅವರ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ಇರಿಸುತ್ತಾರೆ. ನಂತರದ 14 ದಿನ ಅವರೇ ಸ್ವತಃ ನಿಗಾ ಇರಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ನವೆಂಬರ್ 25 ರಿಂದ ಡಿಸೆಂಬರ್ 22 ರವರೆಗೆ ಯು.ಕೆ.ಯಿಂದ ರಾಜ್ಯಕ್ಕೆ 2,500 ಜನರು ಬಂದಿದ್ದಾರೆ. ಪ್ರತಿ ದಿನ ಯು.ಕೆ.ಯಿಂದ ಎರಡೇ ವಿಮಾನ ಬಂದಿದೆ. ಯಾವ ವಿಮಾನದಲ್ಲಿ ಎಷ್ಟು ಜನ ಬಂದಿದ್ದಾರೆ ಎಂಬ ಮಾಹಿತಿಯನ್ನೂ ಕೂಡ ನೀಡಲಾಗುವುದು. ಇಷ್ಟೂ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುವುದು. ಯಾರಲ್ಲಾದರೂ ರೋಗ ಲಕ್ಷಣ ಕಂಡುಬಂದರೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.
ನಿಮ್ಹಾನ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವೈರಸ್ ಬಗ್ಗೆ ಅಧ್ಯಯನ ಮಾಡುವ ನಾಲ್ಕು ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಪಾಸಿಟಿವ್ ಆದವರ ಮಾದರಿಯನ್ನು ಈ ಸಂಸ್ಥೆಗಳಿಗೆ ನೀಡಿ ಹೊಸ ಪ್ರಭೇದದ ವೈರಸ್ ಬಗ್ಗೆ ಅಧ್ಯಯನ ಮಾಡಲಾಗುವುದು. ಅಗತ್ಯವಿದ್ದರೆ ಜೀನ್ ಸೀಕ್ವೆನ್ಸ್ ಅಧ್ಯಯನ ಮಾಡಲಾಗುವುದು ಎಂದು ಸುಧಾಕರ್ ಹೇಳಿದರು.

























































