ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ವೇಗವಾಗಿ ಹಬ್ಬುತ್ತಿದ್ದು, ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ಕಠಿಣ ನಿಯಮ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಯ ಘೋಷಣೆ ಮಾಡಿದೆ.
ರಾಜ್ಯದಲ್ಲೂ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿದ್ದು, ಸೋಂಕು ನಿಯಂತ್ರಣ ಸಂಬಂಧ ಬೆಂಗಳೂರಿನಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಆರ್.ಅಶೋಕ್, ಸುಧಾಕರ್, ಅಶ್ವತ್ಥ ನಾರಾಯಣ ಸಹಿತ ಪ್ರಮುಖ ಸಚಿವರು, ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಮೂರು ತಾಸಿಗೂ ಹೆಚ್ಚು ಹೊತ್ತು ನಡೆದ ಸಭೆಯಲ್ಲಿ ಹಲವು ಕಠಿಣ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್, ಬೆಂಗಳೂರಿನಲ್ಲಿ ಎರಡುವಾರ ಕಾಲ ಶಾಲೆಗಳಲ್ಲಿ ಆಫ್‌ಲೈನ್ ತರಗತಿ ಬಂದ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್‌ಲೈನ್ ತರಗತಿ ರದ್ದುಗೊಳಿಸಲಾಗುತ್ತದೆ. ಶಾಲಾ ಕಾಲೇಜುಗಳು ಆನ್ಲೈನ್ ವಿಧಾನದಲ್ಲಿ ನಡೆಯುತ್ತದೆ ಎಂದರು.
ಇದೇ ವೇಳೆ ರಾಜ್ಯಾದ್ಯಂತ ಜ.6ರಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರಲಿದೆ. ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜನಸೇರುವಿಕೆಗೆ ನಿರ್ಬಂಧಗಳನ್ನು ಹೇರಿರುವ ಸರ್ಕಾರ ಸಭೆ ಸಮಾರಂಭಗಳಲ್ಲಿ ಜನ ಸೇರುವ ಸಂಬಂಧ ಮಿತಿಯನ್ನು ನಿಗದಿಗೊಳಿಸಿದೆ.
- ಹೊಸ ಮಾರ್ಗಸೂಚಿ ಜನವರಿ 5 ರ ರಾತ್ರಿ 10ರಿಂದ ಜನವರಿ 19 ರ ಬೆಳಗ್ಗೆ 5 ರವರೆಗೆ ಜಾರಿ.
- ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಲ್ಲಿ ನರ್ಸಿಂಗ್, ವೈದ್ಯಕೀಯ, ಪ್ಯಾರಾಮೆಡಿಕಲ್, 10, 12 ನೇ ತರಗತಿಗಳು ಮಾತ್ರ ನಡೆಯಲು ಅನುಮತಿ.
- ಉಳಿದ ತರಗತಿಗಳು ಜನವರಿ 6 ರಿಂದಲೇ ಆನ್ಲೈನ್ ನಡೆಸಲು ಅನುಮತಿ
- ರಾಜ್ಯಾದ್ಯಂತ ರಾತ್ರಿ 10- ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ.
- ಶುಕ್ರವಾರ ರಾತ್ರಿ 10 – ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿ.
- ಕಚೇರಿಗಳು 5 ದಿನಗಳ ಕಾಲ ಕಾರ್ಯನಿರ್ವಹಣೆ.
- ಎಲ್ಲಾ ಕಚೇರಿಗಳು ಸೋಮವಾರ – ಶುಕ್ರವಾರದವರೆಗೆ ಮಾತ್ರ.
- ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿ ಕಾರ್ಯನಿರ್ವಾಹಿಸಲು ಅವಕಾಶ
- ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯಕ್ಕೆ ಅನುಸಾರ ಸಮೂಹ ಸಾರಿಗೆಗಳು ಕಾರ್ಯ ನಿರ್ವಹಣೆ.
- ಪಬ್, ಕ್ಲಬ್ ಹೊಟೇಲ್ ಗಳು, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂಗಳಿಗೆ ಶೇ.50 ಮಾತ್ರ ಅವಕಾಶ. ಡಬಲ್ ಡೋಸ್ ನವ್ರಿಗೆ ಮಾತ್ರ ಪ್ರವೇಶ
- ಮದುವೆಗಳಿಗೆ ಹೊರಾಂಗಣ 200 ಜನ, ಒಳಾಂಗಣ 100 ಜನಕ್ಕೆ ಅನುಮತಿ
- ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ವ್ಯಾಕ್ಸಿನ್ ಹಾಕಿಸಿಕೊಂಡ ಒಂದು ಹೊತ್ತಿಗೆ 50 ಭಕ್ತರಿಗೆ ಮಾತ್ರ ಅವಕಾಶ. ಇತರೆ ದೇವರ ಸೇವೆಗಳಿಗೆ ಅವಕಾಶ ಇಲ್ಲ
- ಸೋಮವಾರದಿಂದ ಶುಕ್ರವಾರದವರೆಗೆ ಮಾಲ್, ಷಾಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳಿಗೆ ಅವಕಾಶ
- ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ 50% ಗ್ರಾಹಕರಿಗೆ ಅನುಮತಿ. ಡಬಲ್ ಡೋಸ್ ಕಡ್ಡಾಯ
- ರ್ಯಾಲಿ, ಧರಣಿಗಳಿಗೆ ಅವಕಾಶ ಇಲ್ಲ
- ಸಭೆ, ಸಮಾರಂಭಗಳಿಗೆ 50 ಜನಕ್ಕೆ ಮಾತ್ರ ಅವಕಾಶ