ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಪರಿಸ್ಥಿತಿ ದಿನೇ ದಿನೇ ಹತೋಟಿ ತಪ್ಪುತ್ತಿರುವುದರಿಂದ ಕಠಿಣ ನಿಯಮಾವಳಿಯ ಪರಿಪೂರ್ಣ ಜಾರಿಗೆ ಸರ್ಕಾರ ಕ್ರಮವಹಿಸಿದೆ.
ಕೊರೋನಾ 2ನೇ ಅಲೆಯ ಲಕ್ಷಣಗಳು ಕಂಡುಬರುತ್ತಿದ್ದು ಪಾಸಿಟಿವ್ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹಾಗಾಗಿ ಗೈಡ್‌ಲೈನ್ಸ್ ನಿಯಮ ಉಲ್ಲಂಘಿಸಿದವರ ಮೇಲೆ ಡಂಡ ವಿಧಿಸಲು ಸರ್ಕಾರ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದೆ. ಬಿಗಿ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು, ಮಾರ್ಗಸೂಚಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಿದೆ.
ಮಾಸ್ಕ್ ಧರಿಸದಿದ್ದರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 250 ರೂ., ಇನ್ನುಳಿದೆಡೆ 100 ರೂ. ದಂಡ ವಿಧಿಸಲು. ಬಿಬಿಎಂಪಿ ಮಾರ್ಷಲ್‌ಗಳು, ಹೆಡ್ ಕಾನ್ ಸ್ಟೇಬಲ್ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು, ಹೆಲ್ತ್ ಇನ್ಸ್ ಪೆಕ್ಟರ್, ಪಿಡಿಒ, ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಪರಿಪೂರ್ಣ ಅಧಿಕಾರ ನೀಡಲಾಗಿದೆ.
ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ 250 ರೂ. ದಂಡ ವಿಧಿಸಲಾಗುತ್ತದೆ. ಮದುವೆ ಸಮಾರಂಭಕ್ಕೆ ತೆರೆದ ಪ್ರದೇಶದಲ್ಲಿ 500 ಜನ, ಒಳಾಂಗಣದಲ್ಲಿ 200 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಹುಟ್ಟಿದ ಹಬ್ಬದ ಆಚರಣೆಗೆ ತೆರೆದ ಸ್ಥಳದಲ್ಲಿ 100 ಜನ, ಒಳಾಂಗಣದಲ್ಲಿ 50 ಜನ, ಅಂತ್ಯಕ್ರಿಯೆಗೆ 50, ಇತರೆ ಕಾರ್ಯಕ್ರಮಗಳಿಗೆ 100 ಜನ, ಧಾರ್ಮಿಕ ಆಚರಣೆಗೆ ತೆರೆದ ಪ್ರದೇಶದಲ್ಲಿ 500 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.