ಬೆಂಗಳೂರು: ರಾಜ್ಯ ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಬೊಟ್ಟು ಮಾಡಿದೆ. ಇಂಧನ ಸಚಿವರು ತಮ್ಮ ಇಲಾಖೆಯ ಲಂಚಾವತಾರ ನಿಗ್ರಹಿಸದಿರುವುದನ್ನು ನೋಡಿದರೆ ಅವರದ್ದೂ ದೊಡ್ಡ ಪಾಲಿರುವಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದಲ್ಲಿ ದೂರದೃಷ್ಟಿಯ, ಅಭಿವೃದ್ದಿ ಪರ ಚಿಂತನೆ ಇಲ್ಲದ ಧರ್ಮದ ಹೆಸರಲ್ಲಿ ಪ್ರಚೋದನೆ ಮಾಡುವುದನ್ನೇ ರಾಜಕಾರಣ ಎಂದುಕೊಂಡಿರುವವರಿಂದ ಕರ್ನಾಟಕ ಬೆಳಕು ಕಾಣದೆ ಕತ್ತಲೆಯತ್ತ ಸಾಗಿದೆ. ಬೇಸಿಗೆಯ ಈ ಹೊತ್ತಲ್ಲಿ ಕೃಷಿ ಕಾರ್ಯಗಳಿಗೆ ವಿದ್ಯುತ್ ಸಿಗದೆ, ಪರೀಕ್ಷೆಗಳ ಹೊತ್ತಲ್ಲಿ ವಿದ್ಯಾರ್ಥಿಗಳು ಬೆಳಕು ಕಾಣದೆ ಪರದಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿತ್ತು, ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಬದ್ಧತೆಯಲ್ಲಿ ವಿಶ್ವ ಮಟ್ಟದ ಸೋಲಾರ್ ಪಾರ್ಕ್‌ಗಳನ್ನು ನಿರ್ಮಿಸಿ ಇಂಧನ ಸ್ವಾವಲಂಬನೆಗೆ ಪಣ ತೊಟ್ಟ ಪರಿಣಾಮ ಹೆಚ್ಚುವರಿ ವಿದ್ಯುತ್ ಉಳಿತಾಯವಾಗುವಂತೆ ನೋಡಿಕೊಂಡಿದ್ದರು ಎಂದಿರುವ ಕಾಂಗ್ರೆಸ್, ಪ್ರವಾಹ, ಲಾಕ್‌ಡೌನ್, ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ರೈತರು ಬದುಕು ಕಟ್ಟಿಕೊಳ್ಳಲು ಸಾಲ ಮಾಡಿ ಕೃಷಿಗಿಳಿದಿದ್ದಾರೆ, ಈ ಸಂದರ್ಭದಲ್ಲಿ ಸರ್ಕಾರ ಸಮರ್ಪಕ ವಿದ್ಯುತ್ ನೀಡದೆ ರೈತರ ಬದುಕನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ, ಸದನದ ಕಲಾಪ ಬಿಟ್ಟು ಸಿನೆಮಾ ನೋಡಲು ಬಸ್ ಹತ್ತಿ ಹೋಗುವ ಬಿಜೆಪಿಗರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗದು ಎಂದಿದೆ.
ಭ್ರಷ್ಟ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಲೂಟಿ ಮಿತಿಮೀರಿದೆ, ಟಿಸಿ ಸುಟ್ಟರೆ ತಕ್ಷಣ ಬದಲಿಸುವ ವ್ಯವಸ್ಥೆ ಮಾಡದ ಇಂಧನ ಇಲಾಖೆಯಿಂದಾಗಿ ರೈತರು ಬೆಳೆ ಒಣಗಿಸಿಕೊಂಡು ನಷ್ಟ ಅನುಭವಿಸುವ ಸ್ಥಿತಿ ಒದಗಿದೆ, ಇಂಧನ ಸಚಿವರು ತಮ್ಮ ಇಲಾಖೆಯ ಲಂಚಾವತಾರ ನಿಗ್ರಹಿಸದಿರುವುದನ್ನು ನೋಡಿದರೆ ಅವರದ್ದೂ ದೊಡ್ಡ ಪಾಲಿರುವಂತಿದೆ ಎಂದು ಕಾಂಗ್ರೆಸ್ ಹೇಳಿದೆ.
ಭ್ರಷ್ಟ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಲೂಟಿ ಮಿತಿಮೀರಿದೆ, ಟಿಸಿ ಸುಟ್ಟರೆ ತಕ್ಷಣ ಬದಲಿಸುವ ವ್ಯವಸ್ಥೆ ಮಾಡದ ಇಂಧನ ಇಲಾಖೆಯಿಂದಾಗಿ ರೈತರು ಬೆಳೆ ಒಣಗಿಸಿಕೊಂಡು ನಷ್ಟ ಅನುಭವಿಸುವ ಸ್ಥಿತಿ ಒದಗಿದೆ,
ಇಂಧನ ಸಚಿವರು ತಮ್ಮ ಇಲಾಖೆಯ ಲಂಚಾವತಾರ ನಿಗ್ರಹಿಸದಿರುವುದನ್ನು ನೋಡಿದರೆ ಅವರದ್ದೂ ದೊಡ್ಡ ಪಾಲಿರುವಂತಿದೆ.
4/4— Karnataka Congress (@INCKarnataka) March 20, 2022