ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿನ ಕಡತ ನಾಪತ್ತೆಯಾಗಿದೆ ಎಂಬ ಬಗ್ಗೆ ನಡೆದಿರುವ ಚರ್ಚೆ ಅಚ್ಚರಿ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದು ರಾಜ್ಯದಲ್ಲಿನ ಬೊಮ್ಮಾಯಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಮುಖ್ಯಮಂತ್ರಿಯವರ ಕಚೇರಿಯಲ್ಲಿ ಕಡತ ನಾಪತ್ತೆಯಾಗಿದೆ ಎಂಬ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಅನೇಕ ವಿಚಾರಗಳಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ದಾಖಲೆಗಳನ್ನು ನೀಡಲು ಹಿಂಜರಿಯುತ್ತಿರುವ ಸರ್ಕಾರ ಇದೀಗ ಕಡತಗಳನ್ನೇ ಹೈಜಾಕ್ ಮಾಡುವ ಮಟ್ಟಿಗೆ ತಲುಪಿದೆಯೇ ಎಂಬ ಅನುಮಾನವನ್ನು ಸಾಮಾಜಿಕ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ.. ಸಿಎಂ ಕಚೇರಿಯಿಂದ ನಾಯಿಗಳ ಸಂತಾನಹರಣ ಕೇಂದ್ರಕ್ಕೆ ಕಡತ ಕಳುಹಿಸಿ ಅವಾಂತರ..!
ಕೆಲವು ಸಮಯದ ಹಿಂದೆ ಫ್ಲೆಕ್ಸ್, ಜಾಹೀರಾತು ಅವಾಂತರ ಕುರಿತು ಪ್ರತಿಷ್ಠಿತ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಮಂತ್ರಿಗೆ ಬರೆದಿದ್ದ ಅಹವಾಲನ್ನು ಅಧಿಕಾರಿಗಳು ನಾಯಿಗಳ ಸಂತಾನಹರಣ ವಿಭಾಗಕ್ಕೆ ಕಳುಹಿಸಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಮುಜುಗರದಿಂದ ಪಾರಾಗಲು, ಕೆಲವು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದರು. ಇದೀಗ ಸಿಎಂ ಕಚೇರಿಯಿಂದ ಕಡತ ನಾಪತ್ತೆಯಾಗಿದೆ ಎಂಬ ಚರ್ಚೆ ಮತ್ತೊಂದು ಹೈಡ್ರಾಮಕ್ಕೆ ಸಾಕ್ಷಿಯಾಗಿದೆ.
ಈ ಕುರಿತಂತೆ ವಿಪಕ್ಷ ಕಾಂಗ್ರೆಸ್ ಮಾಡಿರುವ ವ್ಯಂಗ್ಯದ ಸನ್ನಿವೇಶವು ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ‘ಮುಖ್ಯಮಂತ್ರಿ ಕಚೇರಿಯಿಂದ ಮಹತ್ವದ ಕಡತ ಒಂದು ಕಾಣೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ? ಸಿಎಂ ಕಚೇರಿ ಬಸವರಾಜ್ ಬೊಮ್ಮಾಯಿಯವರ ಹಿಡಿತದಲ್ಲಿ ಇಲ್ಲವೇ? ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿ ಪ್ರಶ್ನಿಸಿದೆ. ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತವನ್ನೇ ರಕ್ಷಿಸಲಾಗದವರು ರಾಜ್ಯವನ್ನು ರಕ್ಷಿಸಲು ಸಾಧ್ಯವೇ? ಎಂದೂ ಪ್ರಶ್ನೆ ಮಾಡುತ್ತಾ ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಲೇವಡಿ ಮಾಡಿದೆ.
ಸಿಎಂ ಕಚೇರಿಯಲ್ಲಿ ಮಹತ್ವದ ಕಡತಗಳು ನಾಪತ್ತೆಯಾಗಿರುವುದಕ್ಕೆ ಯಾವ ಕಾರಣ ಹುಡುಕುತ್ತಿದ್ದೀರಿ @BSBommai ಅವರೇ,
ಇಲಿ ಕಚ್ಚಿಕೊಂಡು ಹೋಯಿತೇ?
ಹೆಗ್ಗಣ ಹೊತ್ತುಕೊಂಡು ಹೋಯಿತೇ?
ಗಾಳಿಯಲ್ಲಿ ಹಾರಿ ಹೋಯಿತೇ?ಉತ್ತರ ಪ್ರದೇಶದಲ್ಲಿ 500 ಕೆಜಿ ಗಾಂಜಾವನ್ನು ಇಲಿಗಳು ತಿಂದವಂತೆ! ನಿಮ್ಮದು "ಯುಪಿ ಮಾಡೆಲ್" ಅಲ್ಲವೇ, ನೀವೂ ಅದೇ ಕಾರಣ ಕೊಡುವಿರಾ?
— Karnataka Congress (@INCKarnataka) November 26, 2022
‘ಸಿಎಂ ಕಚೇರಿಯಲ್ಲಿರುವ ಲಂಚ, ಮಂಚದ ಪರಿಣಾಮ ಮಹತ್ವದ ಕಡತಗಳೇ ನಾಪತ್ತೆಯಾಗುವ ಸ್ಥಿತಿ ಒದಗಿದೆ. ಸಿಎಂ ಕಾರ್ಯದರ್ಶಿಯ ಹನಿಟ್ರಾಪ್ ಪ್ರಕರಣವನ್ನು ಬಿಜೆಪಿ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದರ ಹಿಂದೆ ಅತಿ ದೊಡ್ಡ ಹಗರಣ ಇರುವುದು ನಿಶ್ಚಿತ ಎಂದು ವಿಶ್ಲೇಷಣೆ ಮಾಡಿರುವ ಕಾಂಗ್ರೆಸ್, ಹನಿಟ್ರಾಪ್‌ನಿಂದಾಗಿ ಇನ್ನೂ ಯಾವ ಅನಾಹುತಗಳು ಜರುಗಿವೆ?’ ಎಂದು ಪ್ರಶ್ನಿಸುತ್ತಾ ಸಿಎಂ ಬೊಮ್ಮಾಯಿಯವರ ಕಾಳೆಲೆಯುವ ಪ್ರಯತ್ನ ಮಾಡಿದೆ.
ಸಿಎಂ ಕಚೇರಿ ಕಡತ ನಾಯಿಗಳ ಸಂತಾನಹರಣ ಕೇಂದ್ರಕ್ಕೆ ಶಿಫ್ಟ್! ಬೊಮ್ಮಾಯಿ ಅವರೇ, ಏನಿದು ಅವಾಂತರ?





















































