ಮಂಗಳೂರು: ಸಿಆರ್‍ಜೆಡ್ ನಿಯಮಗಳನ್ನು ಸಡಿಲಗೊಳಿಸಿ ಈ ಭಾಗದ ಪ್ರವಾಸೋದ್ಯ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 330 ಕಿ.ಮೀಗಳಿಗಿಂತಲೂ ಹೆಚ್ಚು ಉದ್ದದ ಕರಾವಳಿ ಹೊಂದಿರುವ ರಾಜ್ಯ ನಮ್ಮದು. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಆದರೆ, ಗೋವಾ ಮತ್ತು ಕೇರಳಕ್ಕೆ ಇರುವ ಸಿ.ಆರ್.ಜೆಡ್ ನಿಯಮಗಳು ನಮಗೆ ದೊರಕಿಲ್ಲ. ನಾವು ಅದರ ಹಿಂದೆ ಬಿದ್ದಿದ್ದು, ಇದಾದರೆ ಪ್ರವಾಸೋದ್ಯಮ ಬೆಳೆದು, ಉದ್ಯೋಗ ಸೃಜನೆಯಾಗುತ್ತದೆ. ಬರುವ ದಿನಗಳಲ್ಲಿ ಸಮಗ್ರ ಕರಾವಳಿ ಪ್ರದೇಶದ ಅಭಿವೃದ್ದಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಆರ್ಥಿಕತೆಗೆ ಬಹಳ ದೊಡ್ಡ ಪ್ರಭಾವ ಬೀರಲಿದೆ ಎಂದರು.
ಮಂಗಳೂರು ಮತ್ತು ಕಾರವಾರ ಬಂದರಿನ ವಿಸ್ತರಣೆಗೆ ಈಗಾಗಲೇ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಈ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಬರುವ ದಿನಗಳಲ್ಲಿ ಎರಡೂ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚು ಮಾಡಬಹುದಾಗಿದೆ ಎಂದರು. ಎಂಟು ಮೀನುಗಾರರ ಬಂದರಿನ ಟ್ರೆಜಿಂಗ್ ನ್ನು ಇದೇ ವರ್ಷ ಕೈಗೊಳ್ಳಲಾಗುವುದು. ಇದೊಂದು ದೊಡ್ಡ ದಾಖಲೆ. ಬಂದರಿನಲ್ಲಿ ತುಂಬಿರುವ ಹೂಳನ್ನು ತೆಗೆದು ಹೆಚ್ಚಿನ ದೋಣಿಗಳಿಗೆ ಮತ್ತು ಮೀನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು. ಸಾಮಾನ್ಯ ಮೀನುಗಾರನೂ ಕೂಡ ದೊಡ್ಡ ಬೋಟ್‍ಗಳಲ್ಲಿ ಡೀಪ್ ಸೀ ಫಿಶಿಂಗ್ ನ್ನು ಮಾಡಲು ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ 100 ಕೋಟಿ ರೂ.ಗಳನ್ನು ಸಹಾಯಧನ ರೂಪದಲ್ಲಿ ಒದಗಿಸಲಾಗಿದೆ. ಡೀಸಲ್ ಮತ್ತು ಸೀಮೆಎಣ್ಣೆ ಸಹಾಯಧನ ಕುರಿತಂತೆ ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಲಾಗಿದೆ. ಮೀನುಗಾರಿಕೆ ಈ ಭಾಗದ ಬಹಳ ದೊಡ್ಡ ವೃತ್ತಿ. ಅದಕ್ಕೆ ಸಹಾಯ ಮಾಡುವುದು ನಮ್ಮ ಸರ್ಕಾರದ ಕರ್ತವ್ಯ ಎಂದರು.
ಈ ಭಾಗದಲ್ಲಿ ದೇಗುಲ ಪ್ರವಾಸೋದ್ಯಮಕ್ಕೆ ದೊಡ್ಡ ಅವಕಾಶಗಳಿವೆ. ಅದನ್ನೂ ಕೂಡ ಯೋಜನಾಬದ್ಧವಾಗಿ ಕೈಗೊಳ್ಳುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು. ಸಿ.ಆರ್.ಜೆಡ್ ನಿಯಮಗಳು ಸಿಡಿಲಗೊಂಡರೆ ಜಿಲ್ಲೆ ಒಂದೊಂದು ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿ ಸ್ಥಳ ಗುರುತಿಸಲು ಸಹ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕರಾವಳಿ ಭಾಗ ಆರ್ಥಿಕವಾಗಿ ಮುಂದೆ ಬಂದರೆ ಇಡೀ ರಾಜ್ಯದ ಆರ್ಥಿಕತೆ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಅಕ್ರಮ ಸಕ್ರಮ ಸೇರಿದಂತೆ ಹಲವಾರು ಸಮಸ್ಯೆಗಳು ತೀರ್ಮಾನಗಳಾಗದೇ ನೆನೆಗುದಿಗೆ ಬಿದ್ದಿವೆ. ಅವುಗಳು ಸಚಿವ ಸಂಪುಟದ ಉಪಸಮಿತಿ ಮುಂದೆ ಬರಲಿವೆ. ಕೆಲವು ಕಾನೂನು ಪರಿಹಾರದ ಮೂಲಕ ಬಗೆಹರಿಯಲಿವೆ. ಇನ್ನು ಕೆಲವು ಸಮಸ್ಯೆಗಳಿಗೆ ನ್ಯಾಯಾಲಯದ ಆದೇಶದ ನಿರ್ಬಂಧವಿದೆ. ಅವೆಲ್ಲವನ್ನೂ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಗ್ರಾಮೀಣ ಪ್ರದೇಶ ಬಡಜನರು ಕಾನೂನು ತೊಡಕಿನಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅವರಿಗೆ ನೆಮ್ಮದಿ ಮತ್ತು ಅಭಿವೃದ್ಧಿಯನ್ನು ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳಿದೆ ಎಂದರು.
ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಅದು ಸರಿಯಾದ ರೀತಿಯಲ್ಲಿ ಬಡವರಿಗೆ ಮುಟ್ಟಬೇಕು. ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿವರು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆಯುಷ್ಮಾನ್ ಭಾರತ್, ಆರೋಗ್ಯದ ಕವಚವನ್ನು ಬಡವ ಕಷ್ಟದಲ್ಲಿದ್ದಾಗ ಮುಟ್ಟಿಸಬೇಕಾದ ನೈತಿಕ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ. ರೈತರಿಗೆ ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ದೀನ್ ದಯಾಳ ಉಪಾಧ್ಯಾಯ ವಿದ್ಯುದೀಕರಣ ಯೋಜನೆ ಗರೀಬ್ ಕಲ್ಯಾಣ ಯೋಜನೆ, ಮೂಲಕ ನಿರಂತರವಾಗಿ ರೈತರು, ಬಡವರು, ದುಡಿಯುವ ವರ್ಗದವರ ಬಗ್ಗೆ ಚಿಂತನೆ ಮಾಡಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಕಾರ್ಯಕ್ರಮಗಳ ಫಲಾನುಭವಿಗಳನ್ನು ಭೇಟಿ ಮಾಡಿ ಯೋಜನೆಗಳು ತಲುಪಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಭಿಯಾನವನ್ನು ಮಾಡಿದರೆ ಪ್ರಧಾನಿಗಳ ಯೋಜನೆಗಳಿಗೂ ಫಲಾನುಭವಿಗಳಿಗೆ ಮುಟ್ಟಿ ಸ್ಪಂದನೆ ದೊರೆತರೆ ಅದ್ಭುತವಾದ ಸಂಬಂಧ ಬೆಳೆಯುತ್ತದೆ. ಅವರು ಶಾಶ್ವತವಾಗಿ ಭಾಜಪ ಮತದಾರರಾಗುತ್ತಾರೆ. ಬಹುಮತ ನಮಗಿದೆ. ಆದರೆ ಶಾಶ್ವತ ಮತದಾರರನ್ನು ಹೊಂದುವುದು ನಮ್ಮ ಗುರಿ. ಭಾಜಪ ಮತ್ತು ಜನರ ನಡುವೆ ಉತ್ತಮ ಸಂಬಂಧ ಏರ್ಪಟ್ಟರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಾಂತಿ ಸುವ್ಯವಸ್ಥೆಯ ಸಮಾಜ ನಿರ್ಮಾಣವಾದಾಗ ಅಲ್ಲಿ ಪ್ರಗತಿಯಯನ್ನು ಸಾಧಿಸಲು ಸಾಧ್ಯವಿದೆ. ಅಂತ್ಯೋದಯವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಸಾಮಾಜಿಕವಾಗಿ ಹಲವಾರು ಸವಾಲುಗಳಿವೆ. ನಮ್ಮ ಸರ್ಕಾರ ಶಾಲೆಯ ಸಮವಸ್ತ್ರದಿಂದ ಹಿಡಿದು ಬಂದಿರುವ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಮಗೆ ಗೌರವ ಬರುವ ರೀತಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನೈತಿಕತೆಯಿಂದ ಮುನ್ನುಗ್ಗಿ,ಉತ್ತಮ ಕೆಲಸ ಮಾಡಿ ಜನರ ಪರವಾಗಿ ಧ್ವನಿಯಾಗಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಮುಟ್ಟುವಂತೆ ಕೆಲಸ ಮಾಡಿ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವದಲ್ಲಿ ನಮಗೆ ನಂಬಿಕೆ ಇದೆ. ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಭಾಜಪದ ಪರವಾಗಿ ದೊಡ್ಡ ಅಲೆ ಇದೆ. ಪ್ರತಿ ಮತದಾರನಿಗೆ ಅವನ ಮತ ಗೆಲ್ಲಬೇಕು ಎಂದಿರುತ್ತದೆ. ಅವನ ಮನಸ್ಸು ಗೆದ್ದಾಗ, ಅವನ ಮತ ಗೆಲ್ಲುತ್ತದೆ. ಮತ ಗೆದ್ದಾಗ ಭಾಜಪ ಗೆಲ್ಲುತ್ತದೆ ಎಂದರು. ರಾಜ್ಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಇದೆ. ಕಳೆದ ಬಾರಿ ಹತ್ತು ಸೀಟುಗಳ ಕೊರತೆ ಇತ್ತು. ಈ ಬಾರಿ ನಮ್ಮ ಸ್ವಂತ ಶಕ್ತಿಯ ಮೇಲೆ ನಾವು ನಿಲ್ಲುವ ರೀತಿಯಲ್ಲಿ, ತಮಗೆ ಸ್ವಾಭಿಮಾನ ಬರುವ ರೀತಿಯಲ್ಲಿ 2023 ರಲ್ಲಿ ಭಾಜಪ ಬಾವುಟ ವಿಧಾನಸಭೆಯ 3ನೇ ಮಹಡಿಯಲ್ಲಿ ಹಾರಲಿದೆ. ಕಮಲ ಅರಳಲಿದೆ. ಈಗಿನಿಂದಲೇ ಶ್ರಮವಹಿಸೋಣ. ನಾಲ್ಕು ವರ್ಷ ಒಳ್ಳೆ ಕೆಲಸ ಮಾಡಿದ್ದೇವೆ. ಇನ್ನು ಒಂದು ವರ್ಷ ಉತ್ತಮವಾಗಿ ಮಾಡೋಣ, ಕೊನೆಯ ವರ್ಷ ಹೆಚ್ಚಿನ ಶಕ್ತಿಯಿಂದ ಮುನ್ನುಗ್ಗೋಣ ಎಂದರು.