ಬೆಂಗಳೂರು: ಕೊರೋನಾ ಹೊಡೆತದಿಂದ ಚಿತ್ರರಂಗ ಕೊಚ್ಚಿಹೋಗಿದೆ. ರಾಜ್ಯದಲ್ಲಿಯೂ ನೂರಕ್ಕೆನೂರರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕೊಡುವಂತೆ ಚಿತ್ರರಂಗದ ಪರವಾಗಿ ಮನವಿ ಮಾಡಿದ್ದೇನೆ ಎಂದು ಚಿತ್ರನಟರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಚಿತ್ರೋದ್ಯಮದಲ್ಲಿನ ಬೆಳವಣಿಗೆ ಕುರಿತಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಕೋವಿಡ್ ನಿಂದಾಗಿ ಚಿತ್ರರಂಗಕ್ಕೆ ಸಾಕಷ್ಟು ನಷ್ಟವುಂಟಾಗಿದೆ. ಬೇರೆಬೇರೆ ಚಟುವಟಿಕೆ ಸಭೆ ಸಮಾರಂಭಗಳು ಎಸಿ ಸಭಾಂಗಣಗಳಲ್ಲಿಯೇ ನಡೆಯುತ್ತಿವೆ. ಜನರೂ ಹೆಚ್ಚಾಗಿ ಸೇರುತ್ತಿದ್ದಾರೆ. ಕೇಂದ್ರ ಸರ್ಕಾರ ಶೇ.100ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿಯೂ ಸಹ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ತುಂಬಲು ಅವಕಾಶ ನೀಡುವಂತೆ ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.
ಇಂತಹ ಸಂದರ್ಭದಲ್ಲಿ ಆರೋಗ್ಯ ಮುಖ್ಯ. ಹೀಗಾಗಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಜರುಗಿಸಿ ಶೇ.100ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಲಿ. ತಮಿಳುನಾಡು, ಆಂದ್ರ ಪ್ರದೇಶದಲ್ಲಿ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಿದಾಗ ನಿರ್ಮಾಪಕರ ಸಂಘದ ಅಧ್ಯಕ್ಷರ ಮನವಿ ಮೇರೆಗೆ ಇದನ್ನು ಸಿಎಂ ಗಮನಕ್ಕೆ ತರಲಾಗಿತ್ತು. ಮತ್ತೊಮ್ಮೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.