ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ ಕೇಸ್.. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ.. ಇದರಲ್ಲಿ ರಾಜಕೀಯ ಬೇಡ ಎಂದ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ/ತುಮಕೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಸಚಿವರು ಟ್ವೀಟ್ ಮಾಡಿದ್ದಾರೆ. ಇದು ಅತ್ಯಂತ ವಿಷಾದಕರ ಘಟನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ನಿಯಮಬಾಹಿರವಾಗಿ ಜಿಲೆಟಿನ್ ಸಂಗ್ರಹಿಸುತ್ತಿದ್ದವರ ವಿರುದ್ಧ ಅಧಿಕಾರಿಗಳು ರೈಡ್ ಮಾಡಿದ ವೇಳೆ, ಅದನ್ನು ಬೇರೆಡೆ ಸಾಗಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ನಾಯಕರು ಈ ವಾಸ್ತವಾಂಶ ಅರಿಯದೆ ಇಲ್ಲೂ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.
ಇದೇ ವೇಳೆ, ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಜಿಲೆಟಿನ್ ಅನ್ನು ನಿಯಮ ಪ್ರಕಾರ ಶೇಖರಣೆ ಮಾಡಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿದ್ದು, ಅದನ್ನು ವಿಲೇವಾರಿ ಮಾಡುವಾಗ ಸ್ಫೋಟವಾಗಿ ಅಮಾಯಕರು ಮೃತಪಟ್ಟಿದ್ದಾರೆ. ನಾನು ಸ್ಥಳದಲ್ಲೇ ಇದ್ದು, ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದ್ದೇನೆ. ಇದು ಸಮಗ್ರವಾಗಿ ತನಿಖೆಯಾಗಿ ಯಾರದ್ದೇ ತಪ್ಪಿದ್ದರೂ ನಿರ್ದಾಕ್ಷಿಣ್ಯ ಕಠಿಣ ಕ್ರಮ ವಹಿಸಲಾಗುವುದು ಎಂದರು.