ಚೆನ್ನೈ: ಬೆಂಗಳೂರಿನ ಉದ್ಯಮಿ, ಕರ್ನಾಟಕ ಕರಾವಳಿ ಮೂಲದ ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿ ಅವರಿಗೆ ತಮಿಳುನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.
ಗೋವಿಂದ ಬಾಬು ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ, ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ಮುನ್ಬಡೆಸುವ ವಿಶ್ವವಿದ್ಯಾಲಯವು ಈ ಗೌರವ ಡಾಕ್ಟರೇಟ್ ನೀಡಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಈ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಶಿಕ್ಷಣ ತಜ್ಞರು ಹಾಗೂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಯಾರು ಈ ಗೋವಿಂದ ಬಾಬು ಪೂಜಾರಿ..?
ಬೆಂಗಳೂರು ಮೂಲದ ಖ್ಯಾತ ಆಹಾರೋದ್ದಿಮೆ ಸಂಸ್ಥೆ ChefTalk ಕಂಪೆನಿಯ ಸಂಸ್ಥಾಪಕರಾಗಿರುವ, ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿಯವರು, ಮಹಾರಾಷ್ಟ್ರ, ಆಂಧ್ರ, ದೆಹಲಿ, ಗುಜರಾತ್, ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ತಮ್ಮ ಕಂಪೆನಿಯನ್ನು ವಿಸ್ತರಿಸಿ ಸುಮಾರು 6000 ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಇದೀಗ ಮೀನುಗಾರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮತ್ಸ್ಯಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಚಿಪ್ಸ್, ಖಾದ್ಯಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಿದ್ದಾರೆ. ಕರಾವಳಿಯ ಯುವಜನರಿಗೆ ಉದ್ಯೋಗ ಕಲ್ಪಿಸಲು ರೆಸಾರ್ಟ್ ಸಹಿತ ಪ್ರವಾಸೋದ್ಯಮ ಯೋಜನೆಗೂ ಮುನ್ನುಡಿ ಬರೆದಿದ್ದಾರೆ.
ಸ್ವ ಉದ್ಯೋಗ ಕೈಗೊಳ್ಳಲು ಬಯಸುವ ಮಂದಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ಹತ್ತಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿರುವ ಇವರು, ಅನೇಕರಿಗೆ ವೈದ್ಯಕೀಯ ನೆರವು ನೀಡಿ ಆಪತ್ಪಾಂಧವನೆನಿಸಿದ್ದಾರೆ. ಮುಂದೆ ಆಧುನಿಕ ಸೌಲಬ್ಯದ ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಜನರಿಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸುವ ಹೆಬ್ಬಯಕೆ ಗೋವಿಂದ ಬಾಬು ಪೂಜಾರಿ ಅವರದ್ದು.


























































