ಹಾಸನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜಕೀಯ ಪ್ರತಿಷ್ಠೆಯ ಕಣ ಮಾತ್ರವಲ್ಲ, ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯದ ನಿರ್ಣಯವೂ ಹೌದು. ಹಾಗಾಗಿ ಎನ್‌ಡಿಎ ಮಿತ್ರ ಪಕ್ಷಗಳು ಈ ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ರೂಪಿಸುತ್ತಿವೆ.
ಈ ನಡುವೆ ಎಚ್.ಡಿ.ಕುಮಾರಸ್ವಾಮಿ ಕುಟುಂಬ ತಮ್ಮ ಪುತ್ರನ ಗೆಲುವಿಗಾಗಿ ಟೆಂಪಲ್ ರನ್ ಕೈಗೊಂಡಿದ್ದು, ಪೂಜೆಯ ವೇಳೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ. ದೇವರ ವಿಗ್ರಹದ ಬಲಗಡೆಯಿಂದ ಹೂವು ಬಿದ್ದಿದ್ದು, ಈ ಬಗ್ಗೆ ಬಗೆಬಗೆಯ ಚರ್ಚೆ ಶುರುವಾಗಿದೆ.
ಕುಮಾರಸ್ವಾಮಿಯವರು ಭಾನುವಾರ ಪತ್ನಿ ಅನಿತಾ ಹಾಗೂ ಸೊಸೆ, ಮೊಮ್ಮಗು ಜೊತೆಗೆ ಹಾಸನಾಂಬೆ ಜಾತ್ರೆಯಲ್ಲಿ ಭಾಗವಹಿಸಿದರು. ಬಳಿಕ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪೂಜೆ ನೆರವೇರಿತ್ತಿರುವಾಗಲೇ ವಿಗ್ರಹದ ಬಲಗಡೆಯಿಂದ ಹೂ ಬಿದ್ದಿದೆ. ದೇವರ ಮೇಲಿಂದ ಹೂವು ಬಿದ್ದಾಗ ಪತ್ನಿ ಅನಿತಾ ಅವರು ಪುಳಕಿತರಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ವೈಖರಿಯೂ ಗಮನಸೆಳೆದಿದೆ.
ಈ ವೀಡಿಯೋವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಂಚಿಕೊಂಡಿದ್ದಾರೆ. ಈ ಸನ್ನಿವೇಶ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಗೆ ಬಗೆಯ ವಿಶ್ಲೇಷಣೆ ನಡೆದಿದ್ದು, ಈ ವಿದ್ಯಮಾನವು ನಿಖಿಲ್ ಗೆಲುವಿಗೆ ಶುಭ ಸೂಚನೆಯಾಗಿದೆ ಎಂದು ಜೆಡಿಎಸ್ ನಾಯಕರು ಬಣ್ಣಿಸಿದ್ದಾರೆ.
ಹಾಸನದ ಶ್ರೀ ಹಾಸನಾಂಬೆ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀ ಸಿದ್ದೇಶ್ವರ ದೇವರ ದರ್ಶನ ಮಾಡಿಕೊಳ್ಳಲಾಯಿತು.#ಶ್ರೀಹಾಸನಾಂಬೆ pic.twitter.com/1M9kWHkZtd
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 27, 2024