ಬೆಂಗಳೂರು: ಸಾಹಿತ್ಯ ಲೋಕದಲ್ಲಿ ‘ಚಂಪಾ’ ಎಂದೇ ಹೆಸರಾದ ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ಸ್ನಾತಕೋತ್ತರ (1962) ಪದವೀಧರರು. ಅದೇ ವಿಶ್ವವಿದ್ಯಾನಿಲಯದ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ‘ಚಂಪಾ’ ಅವರು ಸ್ನೇಹಿತರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರ ಜೊತೆ ಸೇರಿ ‘ಸಂಕ್ರಮಣ’ (1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು. 2018ರ ವರೆಗೂ ಆ ಪತ್ರಿಕೆ ಪ್ರಕಟವಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಟಿಷ್ ಕೌನ್ಸಿಲ್‍ನ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡ್‍ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ.ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲೀಷ್ ಸಂಸ್ಥೆಯಿಂದ ಇಂಗ್ಲೀಷ್ ಅಧ್ಯಯನದ ಡಿಪ್ಲೊಮಾ ಪಡೆದಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾಗಿ, ಛೇರ್‍ಮನ್ ಆಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು.
ತುರ್ತುಪರಿಸ್ಥಿತಿಯ ದಿನಗಳಲ್ಲಿ, ಅದನ್ನು ಪ್ರತಿಭಟಿಸಿ, ಜೆ.ಪಿ.ಚಳವಳಿ ಬೆಂಬಲಿಸಿ ಜೈಲುವಾಸ ಅನುಭವಿಸಿದ್ದರು ಎಂದು ನೆನಪು ಮಾಡಿದ್ದಾರೆ. ಮೃತರ ಕುಟುಂಬ, ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಕರುಣಿಸಲಿ ಎಂದು ನಳಿನ್ ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.