ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಇಬ್ರಾಹಿಂ ಅವರಿಗೆ ಆ ಪಕ್ಷದಲ್ಲಿ ಜೋಕರ್ ಪಾತ್ರ ಕೊಡಲಾಗಿದೆ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಜೆಡಿಎಸ್‍ನಲ್ಲಿ ಯಾವ ಮುಖಂಡರಿದ್ದಾರೆ. ಇಬ್ರಾಹಿಂ ಅವರು ಅಧ್ಯಕ್ಷರಾಗಿದ್ದರೂ ಅವರ ಮಾತು ನಡೆಯುತ್ತದೆಯೇ? ಎಂದು ಪ್ರಶ್ನಿಸಿದರು. ಹಿಂದೆ ಎಚ್.ಕೆ.ಕುಮಾರಸ್ವಾಮಿ ಎಂಬ ದಲಿತರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದರು. ನೈಜ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ದಲಿತ ಮುಖಂಡನನ್ನು ಸರ್ವನಾಶ ಮಾಡಲಾಗಿದೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ಇವತ್ತೂ ಹೈಕಮಾಂಡ್ ಎಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರನ್ನೇ ಹೇಳುತ್ತಾರೆ ಎಂದು ತಿಳಿಸಿದರು. ಖರ್ಗೆಯವರಿಗೆ ನಾಮಕಾವಾಸ್ತೆ ಹುದ್ದೆ ಕೊಟ್ಟಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ತೊರೆದು ಅನೇಕ ಜನರು ಬಿಜೆಪಿ ಸೇರುತ್ತಿದ್ದಾರೆ ಎಂದ ಅವರು, ಮುಂದೆ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.