ದೆಹಲಿ; ವಿಧಾನಸಭಾ ಚುನಾವಣೆಗಳ ಬಗ್ಗೆ ರಣತಂತ್ರ ರೂಪಿಸುತ್ತಿರುವಾಗಲೇ ಕರ್ನಾಟಕದ ಸಚಿವರೊಬ್ಬರ ವಿವಾದದ ಪ್ರಸಂಗ ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿದೆ. ಅದರಲ್ಲೂ ಸರ್ಕಾರ ರಚನೆಗೆ ಕಾರಣರಾದವರೇ ಈ ವಿವಾದದಲ್ಲಿ ಸಿಲುಕಿರುವುದೇ ಬಿಜೆಪಿ ವರಿಷ್ಠರ ಪಾಲಿಗೆ ತಲೆನೋವಾಗಿರುವುದು.
ವಿವಾದ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯದ ಪ್ರಮುಖರಿಂದ ಬಿಜೆಪಿ ವರಿಷ್ಠರು ಮಾಹಿತಿ ಪಡೆದಿದ್ದು, ಜಾಣ್ಮೆಯಿಂದಲೇ ವಿವಾದದಿಂದ ಹೊರಬರಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಯಾವ ರೀತಿ ಪರಿಸ್ಥಿತಿ ನಿಭಾಯಿಸುವುದು ಎಂಬುದೇ ಈ ನಾಯಕರ ಮುಂದಿರುವ ಸವಾಲು.
ಈ ನಡುವೆ, ವೀಡಿಯೋ ವಿವಾದ ಕುರಿತಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ರಾಷ್ಟ್ರೀಯ ನಾಯಕರು ಹಾಗೂ ಸಂಘದ ಪ್ರಮುಖರು ಚರ್ಚೆ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮಕ್ಕೂ ಬಂದಿದೆ ಎನ್ನಲಾಗುತ್ತಿದೆ. ಆದರೆ, ಸಿ.ಟಿ.ರವಿ ಸದ್ಯ ತಮಿಳುನಾಡು ವಿಧಾನಸಭಾ ಸಮರದ ರಣತಂತ್ರದಲ್ಲಿ ಮಗ್ನರಾಗಿದ್ದು ಕರ್ನಾಟಕ ರಾಜಕಾರಣ ವಿಚಾರದಲ್ಲಿ ಸದ್ಯ ದೂರ ಇದ್ದಾರೆ. ಅಮಿತ್ ಶಾ ಕೂಡಾ ಅಹಮದಾಬಾದ್ ಬೆಳವಣಿಗೆಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ. ಹಾಗಾಗಿ ಸಕಲ ಜವಾಬ್ಧಾರಿ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರ ಹೆಗಲೇರಿದೆ.
ಇದೆಲ್ಲದರ ನಡುವೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ಗಮನಿಸಿದರೆ ಬಿಜೆಪಿ ಹೈಕಮಾಂಡ್ ಇಂದು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಧ್ಯತೆಗಳಿವೆ.
ನಮ್ಮದು ಶಿಸ್ತಿನ ಪಕ್ಷ. ಈ ಇವೆಲ್ಲಾ ಸಹಿಸಲ್ಲ, ಈ ಬಗ್ಗೆ ಪರೀಶಿಲನೆ ಮಾಡಲಾಗುತ್ತದೆ ಎನ್ನುವ ಮೂಲಕ ಪ್ರಹ್ಲಾದ್ ಜೋಷಿಯವರು ಶಿಸ್ತು ಕ್ರಮದ ಸುಳಿವು ನೀಡಿ ವಿದ್ಯಮಾನಕ್ಜೆ ರೋಚಕತೆ ತುಂಬಿದ್ದಾರೆ.