ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಡಿ ಸರ್ಕಾರವು, ತನ್ನ ಅಕ್ರಮ ಚಟುವಟಿಕೆಗಳ ಸಿಡಿಗಳನ್ನು ರಕ್ಷಿಸಿಕೊಳ್ಳಲು ಡ್ರಾಮಾ ಮಾಡುತ್ತಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ‘ಎಸ್‌ಐಟಿ ಏನು ವಿಚಾರಣೆ ಮಾಡುತ್ತದೆ ಎಂಬುದು ಆರೋಪಿಗೆ ತಿಳಿಯುತ್ತದೆ. ಆ ಮೇಲೆ ಆತ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಇದು ಸಿಡಿ ಸರ್ಕಾರದ ಪ್ರಾಸ್ತಾವಿಕ ಡ್ರಾಮಾ ಎಂದು ದೂರಿದರು.
ಮಗಳ ವಯಸ್ಸಿನ ಹೆಣ್ಣಿಗೆ ಆದ ನೋವಿನ ಬಗ್ಗೆ ಸರ್ಕಾರ, ಮಾಧ್ಯಮಗಳು, ಎಸ್ ಐಟಿ ಚರ್ಚೆಯನ್ನೂ ಮಾಡುತ್ತಿಲ್ಲ. ಬೇರೆ ಯಾರಾದರೂ ಈ ರೀತಿ ಸ್ವಲ್ಪ ಮಾಡಿದ್ದರೂ, ಜೈಲಿಗೆ ಹಾಕುತ್ತಿದ್ದರು ಎಂದು ಅವರು ಹೇಳಿದರು.
ಈ ಸಿಡಿ ಸರ್ಕಾರ ಅಭಿವೃದ್ಧಿ ಬಗ್ಗೆ, ಕೊರೋನಾ ಬಗ್ಗೆ, ರಾಜ್ಯದಲ್ಲಿ ಬರದಿಂದ ನೀರಿಗೆ ಹಾಹಾಕಾರದ ಬಗ್ಗೆ ಚಿಂತಿಸುತ್ತಿಲ್ಲ. ಇವರ ಚಿಂತನೆ ಸಿಡಿ ರಕ್ಷಿಸಿಕೊಂಡು, ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಹೋಗಲು ಚಿಂತಿಸುತ್ತಿದೆ ಇದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಸಿಗುತ್ತಿದೆ. ಸಂತ್ರಸ್ತ ಯುವತಿಯನ್ನು ಡಿ.ಕೆ ಶಿವಕುಮಾರ್ ಅವರು ನಿಯಂತ್ರಿಸುತ್ತಿದ್ದಾರೋ, ಎಸ್ ಐಟಿ ನಿಯಂತ್ರಿಸುತ್ತಿದೆಯೋ ನನಗೆ ಗೊತ್ತಿಲ್ಲ. ಆದರೆ ಈ ಎಸ್‌ಐಟಿಗೆ ಫ್ರೇಮ್ ವರ್ಕ್ ಎಂಬುದೇ ಇಲ್ಲ ಎಂದು ಡಿ.ಕೆ.ಸುರೇಶ್ ದೂರಿದರು.
ಯುವತಿ ಹೇಳಿಕೆ ಆಧಾರದ ಮೇಲೆ ಇದುವರೆಗೂ ವಿಚಾರಣೆ ನಡೆಯುತ್ತಿಲ್ಲ. ಯುವತಿ ದೂರಿನ ಮೇಲೆ ಪ್ರಕರಣ ದಾಖಲು ಅಂತಾರೆ. ಆದರೆ ಆರೋಪಿಗೆ ಪೊಲೀಸರ ಸೆಕ್ಷನ್ ಹಾಕಿದ್ದಾರೆ, ಆದರೆ ವಿಚಾರಣೆ ನಡೆಯುತ್ತಿಲ್ಲ. ಇದು ಪ್ರಕರಣ ಮುಚ್ಚಿಹಾಕುವ ಕುತಂತ್ರವೇ ಹೊರತು ಬೇರೇನೂ ಅಲ್ಲ ಎಂದು ಬಣ್ಣಿಸಿದರು.
ರಾಷ್ಟ್ರೀಯ ಪಕ್ಷವಾಗಿ, ಸಂಸ್ಕೃತಿ ಬಗ್ಗೆ ಮಾತನಾಡುವ ಪಕ್ಷವಾಗಿ ಈ ರೀತಿ ಮಾಡುತ್ತಿರುವುದು ನೋಡಿದರೆ, ಇದು ಸಿಡಿಯಿಂದ ಉಳಿದುಕೊಂಡಿರುವ ಸರ್ಕಾರವೇ ಹೊರತು ಬೇರೇನೂ ಅಲ್ಲ. ಇಡೀ ಪ್ರಕರಣ ಮುಚ್ಚಿಹಾಕಲು ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾವು ಯುವತಿಯ ರಕ್ಷಣೆಗೆ ನಿಲ್ಲಬೇಕಾಗುತ್ತದೆ. ಇದರ ಬಗ್ಗೆ ನಮ್ಮ ನಾಯಕರ ಜತೆ ಚರ್ಚಿಸಿ ಹೊರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಗೃಹಸಚಿವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ನೀವು ಅತ್ಯಾಚಾರವನ್ನಾದರೂ ಮಾಡಬಹುದು, ದೂರು ಕೊಟ್ಟರೆ ಅದನ್ನು ದಾಖಲಿಸಿ ಇಟ್ಟುಕೊಳ್ಳುತ್ತೇವೆ. ಹೋಗಕ್ಕೆ ಬರಕ್ಕೆ ಪೊಲೀಸ್ ರಕ್ಷಣೆ ನೀಡುತ್ತೇವೆ ಎನ್ನುವಂತಾಗಿದೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ ಎಂದು ಆರೋಪಿಸಿದರು.