ಬೆಂಗಳೂರು: ವಿದ್ಯಾರ್ಥಿ ಬದುಕಿಗೆ ತಿರುವು ನೀಡುವುದೇ 12ನೇ ತರಗತಿ ಪರೀಕ್ಷೆ. ಆದರೆ ಕೋವಿಡ್ ಸಂಕಟ ಕಾಲದಲ್ಲಿ ಈ ಪರೀಕ್ಷೆ ನಡೆಸಲಾಗದೆ ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿದೆ. ಇಂದು ಪ್ರಕಟಿಸಿದ ಪರೀಕ್ಷೆ ರದ್ದತಿಯ ತೀರ್ಮಾನದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ತಮಗೆ ಸಿಗಬಹುದಾದ ಅಂಕದ ಬಗ್ಗೆ ಆತಂಕಗೊಂಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಪ್ರಕಟಿಸಬಹುದಾದ ಸ್ಪಷ್ಟ ಸೂತ್ರದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಚಿಂತೆ ಎದುರಾಗಿದೆ.
ವಿದ್ಯಾರ್ಥಿಗಳ ಈ ಆತಂಕದ ಪರಿಸ್ಥಿತಿಯತ್ತ ಬೊಟ್ಟು ಮಾಡಿರುವ ರಾಜ್ಯ ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕಾಂಗ್ರೆಸ್ ನಾಯಕ ರಮೇಶ್ ಬಾಬು, ಕೇಂದ್ರ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.
ಕೋವಿಡ್ ಸಂದರ್ಭದ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಬದುಕಿನಲ್ಲೂ ಚೆಲ್ಲಾಟವಾಡುತ್ತಿದೆ ಎಂದು ರಮೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ನಿರ್ಧಾರವನ್ನು ಕೈಗೊಂಡಿರುವ ಕೇಂದ್ರ ಸರ್ಕಾರದ ಕ್ರಮ ಕುರಿತಂತೆ ಪ್ರತಿಕ್ರಯಿಸಿರುವ ಕೆಪಿಸಿಸಿ ವಕ್ತಾರರೂ ಆದ ರಮೇಶ್ ಬಾಬು, ಕೇಂದ್ರ ಸರ್ಕಾರ ತನ್ನ ಲೋಪವನ್ನು ಮರೆಮಾಚಲು ಪ್ರಯತ್ನಿಸುತ್ತಲೇ ಇದೆ. ಅದರ ಜೊತೆಯಲ್ಲೇ ಇದೀಗ ಸಿಬಿಎಸ್‌ಇ ಪರೀಕ್ಷಾ ವಿಚಾರದಲ್ಲೂ ಆತುತದ ನಿರ್ಧಾರವನ್ನು ಕೈಗೊಂಡು ವಿಧ್ಯಾರ್ಥಿಗಳ ಬದುಕಲ್ಲೂ ಆಟವಾಡಿದೆ ಎಂದು ದೂರಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೌಲ್ಯಮಾಪನದ ಮಾನದಂಡವನ್ನಾದರೂ ಪ್ರಕಟಿಸಲಿ ಎಂದವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ
ಈ ಕುರಿತಂತೆ ರಮೇಶ್ ಬಾಬು ಅವರು ಮಾಡಿರುವ ಟ್ವೀಟ್ ಕೂಡಾ ಗಮನಸೆಳೆದಿದೆ. ಮಕ್ಕಳ ಭವಿಷ್ಯದ ಬಗ್ಗೆ ಅವರು ಈ ಟ್ವೀಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
Central Decision to cancel 12 exams 2021 is unfortunate Simply Govt played with students- parents Due to their failure 2 academic calendar spoiled They must release criteria for evaluation in the interest of Students Teachers#boardexams2021 #pmoff #SocialMedia #aicc #MediaWatch pic.twitter.com/cwCnzASP54
— Ramesh Babu (@rameshbabuexmlc) June 1, 2021