ಚಿಕ್ಕಮಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನ ಹಿನ್ನೆಲೆ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಹಾಗೂ 100ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಬಂಧನಕ್ಕೊಳಗಾಗಿದ್ದ ರವಿ ಅವರನ್ನು ಕರ್ನಾಟಕ ಹೈಕೋರ್ಟ್‌ನ ಆದೇಶದ ನಂತರ ಮರುದಿನ ರಾತ್ರಿ ಬಿಡುಗಡೆ ಮಾಡಲಾಯಿತು. ರವಿ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿತ್ತು.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಶಾಂತಿ ಕದಡುವ, ಸಾರ್ವಜನಿಕ ಸ್ಥಳಗಳಲ್ಲಿ ಟೈರ್ ಸುಟ್ಟು ಮತ್ತು ಬಲವಂತವಾಗಿ ಅಂಗಡಿಗಳು ಮತ್ತು ಸಂಸ್ಥೆಗಳನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.