ಬೆಂಗಳೂರು: ಬೆಂಗಳೂರಿನಲ್ಲಿ ರಾಷ್ಟ್ರಭಕ್ತ ಮಹಾಪುರುಷರ ಪುತ್ಥಳಿಗೆ ಮಸಿ ಬಳಿದು ಅವಮಾನಗೊಳಿಸುವ ಮೂಲಕ ಹಿಂಸಾಚಾರಕ್ಕೆ ಆಸ್ಪದ ಕೊಟ್ಟು, ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ವಿನಾಕಾರಣ ಆತಂಕವನ್ನು ಸೃಷ್ಟಿಸಿರುವ ವಿಚ್ಛಿದ್ರಕಾರಿ ದುಷ್ಟಶಕ್ತಿಗಳನ್ನು ಮತ್ತು ಈ ಘಟನೆಗಳ ಹಿಂದಿರುವ ಷಡ್ಯಂತ್ರವನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಪುತ್ಥಳಿಗೆ ಮಸಿ ಬಳಿದು ಬಂಧಿತರಾಗಿರುವ ಏಳು ವ್ಯಕ್ತಿಗಳನ್ನು ವಿಚಾರಿಸಿ ಈ ರೀತಿಯ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಚಟುವಟಿಕೆಗಳ ಹಿಂದೆ ಇರುವ ಷಡ್ಯಂತ್ರವನ್ನು ಪತ್ತೆ ಹಚ್ಚುವುದು ಅತ್ಯಂತ ಜರೂರು ಮತ್ತು ಅನಿವಾರ್ಯವಾಗಿದೆ. ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಈ ಷಡ್ಯಂತ್ರ ಒಂದು ಖಂಡನಾರ್ಹ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಂಧಿತ ಆರೋಪಿ ನವೀನ್ ಗೌಡ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಜಮೀರ್ ಅಹಮದ್ ಅವರ ನಿಕಟವರ್ತಿಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತನಾಗಿರುತ್ತಾನೆ. ನವೀನ್ ಗೌಡನ ಕಾಂಗ್ರೆಸ್ ಜೊತೆಗಿನ ನಂಟು ಹಾಗೂ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯರವರ ಕೋಮುಗಲಭೆಯ ಟ್ವೀಟ್ ಈ ಘಟನೆಗಳ ಹಿಂದೆ ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಿ ಕ್ಷೋಭೆಯ ವಾತಾವರಣ ನಿರ್ಮಾಣ ಮಾಡುವ ಕಾಂಗ್ರೆಸ್ನ ಷಡ್ಯಂತ್ರದ ಭಾಗವಾಗಿರುವುದು ಕಂಡುಬರುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಕಾಂಗ್ರೆಸ್, ಎನ್‍ಸಿಪಿ ಮತ್ತು ಶಿವಸೇನೆಯ ಆಡಳಿತವಿರುವ ಮಹಾರಾಷ್ಟ್ರದಲ್ಲಿ ದುಷ್ಟ ಶಕ್ತಿಗಳು ಕನ್ನಡ ಧ್ವಜವನ್ನು ಸುಟ್ಟು ಹಾಕಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುವ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ದೇಶಕ್ಕೆ ಅಪಾಯ. ಅದು ವಿರೋಧ ಪಕ್ಷವಾಗಿದ್ದರೆ ದೇಶಕ್ಕೆ ಎರಡು ಪಟ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ ಎನ್ನುವುದನ್ನು ನಾಡಿನ ಜನತೆ ಗಮನಿಸಬೇಕೆಂದು ವಿನಂತಿಸಿದ್ದಾರೆ.
ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ಹುತಾತ್ಮರಾದ ಕನ್ನಡ ನಾಡಿನ ಹೆಮ್ಮಯ ಪುತ್ರ ಗಂಡುಗಲಿ ಸಂಗೊಳ್ಳಿ ರಾಯಣ್ಣ, ಬ್ರಿಟಿಷ್ ದುರಾಡಳಿತದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿ ಮಾತೃಶಕ್ತಿಗೆ ಗೌರವ ತಂದುಕೊಟ್ಟಿರುವ ದೇಶಭಕ್ತೆ ವೀರರಾಣಿ ಕಿತ್ತೂರು ಚನ್ನಮ್ಮ, ಮೊಘಲ್ ದುರಾಡಳಿತ ಮತ್ತು ಆ ಸಮಯದಲ್ಲಿ ದೇಶಾದ್ಯಂತ ನಡೆದಿರುವಂಥ ಕ್ರೌರ್ಯ, ಅತ್ಯಾಚಾರ ಹಾಗೂ ಬಲಾತ್ಕಾರದ ಮತಾಂತರಗಳನ್ನು ಪ್ರತಿಭಟಿಸಿ ಮೊಘಲ್ ಸಾಮ್ರಾಜ್ಯಕ್ಕೆ ಸವಾಲನ್ನು ಹಾಕಿ ಹಿಂದುವೀ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದ ಶಿವಾಜಿ ಮಹಾರಾಜ್ ಮುಂತಾದ ಮಹಾನ್ ದೇಶಭಕ್ತರುಗಳು ನಾಡಿನ ಜನತೆಗೆ ನಿತ್ಯ ನಿರಂತರ ದೇಶಪ್ರೇಮದ ಪ್ರೇರಣೆ ನೀಡುವ ಮಹಾಪುರುಷರು. ಈ ರಾಷ್ಟ್ರಭಕ್ತರಿಗೆ ಅವಮಾನವೆಸಗುವ ಕೃತ್ಯಗಳು ಇಡೀ ದೇಶಕ್ಕೆ ಮಾಡಿದ ಅಪಮಾನ. ಈ ಅಪಚಾರವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಮಹಾ ಪುರುಷರ ಪುತ್ಥಳಿಗಳನ್ನು ಸಂರಕ್ಷಿಸಲು ಮತ್ತು ಕಿಡಿಗೇಡಿಗಳ ದುಷ್ಕøತ್ಯಗಳಿಗೆ ಅವಕಾಶವಿಲ್ಲದಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಹಾನ್ ದೇಶಭಕ್ತರ ಪುತ್ಥಳಿಗಳನ್ನು ಅಗೌರವಿಸುವುದರ ಮೂಲಕ ನಾಡಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಿಸಿ, ಕ್ಷೋಭೆ ಉಂಟು ಮಾಡುವ ದುಷ್ಕøತ್ಯವನ್ನು ಖಂಡಿಸುತ್ತಾ, ಈ ಕೃತ್ಯದ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆದು ಷಡ್ಯಂತ್ರದಲ್ಲಿ ಭಾಗವಹಿಸಿದ ಎಲ್ಲ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಸನ್ಮಾನ್ಯ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳನ್ನು ಒತ್ತಾಯಿಸುತ್ತಾ, ಮುಂದಿನ ದಿನಗಳಲ್ಲಿ ಈ ರೀತಿಯ ದುಷ್ಕøತ್ಯಗಳು ನಡೆಯದಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸುವುದಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.