ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಪ್ರತಿಪಕ್ಷ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೆ, ಅದೇ ಪಕ್ಷದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯರ ಬಜೆಟನ್ನು ಶ್ಲಾಘಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ಲಾಘಿಸುವ ಮೂಲಕ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿಯೊಳಗೆ ಸಂಚಲನ ಸೃಷ್ಟಿಸಿದ್ದಾರೆ.
2019ರಲ್ಲಿ ಕಾಂಗ್ರೆಸ್‌ನಿಂದ ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡ ಎಸ್.ಟಿ.ಸೋಮಶೇಖರ್ ಇತ್ತೀಚೆಗೆ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಅಸಮಾಧಾನ ಮೂಡಿಸಿದೆ. ಬಿಜೆಪಿ ಚಟುವಟಿಕೆಗಳಿಂದ ಗಮನಾರ್ಹ ಅಂತರ ಕಾಯ್ದುಕೊಳ್ಳುವ ಮೂಲಕ ಪಕ್ಷದ ಸದಸ್ಯರ ಹುಬ್ಬೇರುವಂತೆ ಮಾಡಿದ್ದರು. ವಿಧಾನಸಭಾ ಅಧಿವೇಶನದ ಆರಂಭದ ದಿನದಂದು, ಬಿಜೆಪಿ ಶಾಸಕರು ಕೇಸರಿ ಶಾಲುಗಳನ್ನು ಧರಿಸಿದರೆ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ತಮ್ಮ ಪಕ್ಷದ ಶಾಸಕರಿಂದ ದೂರ ಉಳಿದಿದ್ದರು. ಇದೀಗ ಅವರು ಕಾಂಗ್ರೆಸ್ ಸರ್ಕಾರದ ಬಜೆಟ್ ಬಗ್ಗೆ ಪ್ರಶಂಸಿರುವುದು ಅಚ್ಚರಿಯ ಬೆಳವಣಿಗೆ.
ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕ ಎಸ್.ಟಿ.ಸೋಮಶೇಖರ್, ಬೆಂಗಳೂರಿನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಿದ್ದು, ವಿಶೇಷವಾಗಿ ಕುಡಿಯುವ ನೀರು, ಕಸ ನಿರ್ವಹಣೆ, ಸಂಚಾರ, ವೈಟ್ ಟಾಪಿಂಗ್ ಮತ್ತು ಫ್ಲೈಓವರ್ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮಗಳನ್ನು ಪ್ರಶಂಸಿಸಿದರು. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.

















































