ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ದಾಖಲಾಗಿರುವ ಪೋಕ್ಸೋ ಕೇಸ್ನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿವಾದಾತ್ಮಕ ಹೇಳಿಕೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ತನ್ನ ಅಪ್ರಾಪ್ತೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದ ಸಂತ್ರಸ್ತೆ ತಾಯಿಯನ್ನು ‘ಮಾನಸಿಕ ಅಸ್ವಸ್ಥೆ’ ಎಂದು ಗೃಹ ಸಚಿವ ಪರಮೇಶ್ವರ್ ಅವರೇ ಹೇಳಿದ್ದರು ಎಂದು ಬಿಜೆಪಿ ಹೇಳುತ್ತಿದೆ. ಪ್ರಕರಣ ದಾಖಲಾದ ಸಂದರ್ಭದಲ್ಲಿ ಪರಮೇಶ್ವರ್ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಇದೀಗ ಅಸ್ರವನ್ನಾಗಿ ಬಳಸಿಕೊಂಡಿದೆ.
ಇದೇ ವೇಳೆ, ದೂರು ದಾಖಲಾಗಿ 3 ತಿಂಗಳವರೆಗೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಸಂಗತಿಯತ್ತ ಬೊಟ್ಟು ಮಾಡಿರುವ ಬಿಜೆಪಿ, ಇದೀಗ ದಿಢೀರನೇ ಬಿಎಸ್ವೈ ಬಂಧನಕ್ಕೆ ಮುಂದಾಗಿದ್ದೇಕೆ ಎಂದು ತನಿಖಾಧಿಕಾರಿಗಳ ಲೋಪದ ಬಗ್ಗೆಯೂ ಆರೋಪ ಮಾಡಿದೆ.
ಬಿಎಸ್ವೈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ಹೊರಹಾಕಿರುವ ಬಿಜೆಪಿ, ‘ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ. ರಾಜ್ಯ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ ಅಸ್ವಸ್ಥೆ ನೀಡಿದ್ದ ದೂರನ್ನು ಆಧರಿಸಿ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲು ಹವಣಿಸುತ್ತಿದೆ’ ಎಂದು ದೂರಿದೆ.
ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ತಲೆದಂಡ ಹಾಗೂ ಸ್ವತಃ ಸರ್ಕಾರದ ಮೇಲೆ ಆರೋಪ ಬಂದಿರುವ ಬೆನ್ನಲ್ಲೇ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಯಡಿಯೂರಪ್ಪನವರ ಮೇಲೆ ಅಪಪ್ರಚಾರದ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ದೂರಿದೆ.
ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ @INCIndia ನಾಯಕರು ಬಿಜೆಪಿ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ. @BJP4Karnataka ವಿರುದ್ಧ ಅಪಪ್ರಚಾರ ಮಾಡಿದ್ದ @RahulGandhi ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ… pic.twitter.com/JtFwfqQQrG
— BJP Karnataka (@BJP4Karnataka) June 13, 2024
‘ಈ ಹಿಂದೆ ಸ್ವತಃ ಗೃಹ ಸಚಿವ ಅವರೇ ಮಾನಸಿಕ ಅಸ್ವಸ್ಥೆ ದುರುದ್ದೇಶಪೂರಿತವಾಗಿ ದೂರು ನೀಡಿದ್ದಾಳೆಂದು ಹೇಳಿಕೆ ನೀಡಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. 3 ತಿಂಗಳ ನಂತರ ಈ ಪ್ರಕರಣಕ್ಕೆ ಮರುಜೀವ ತುಂಬಲು ಹೊರಟಿರುವುದು ವಿಪರ್ಯಾಸ. ಮಾನಸಿಕ ಅಸ್ವಸ್ಥೆ ಸ್ವತಃ ತನ್ನ ಮಕ್ಕಳು ಹಾಗೂ ಗಂಡನ ವಿರುದ್ಧವೇ ದೂರು ನೀಡಿರುವುದೂ ಸೇರಿದಂತೆ 53 ಜನರ ವಿರುದ್ಧದ ದೂರುಗಳಲ್ಲಿ ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಕಾಂಗ್ರೆಸ್ಸಿನ ದೆಹಲಿ ನಾಯಕರ ನೀಚ ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಯಡಿಯೂರಪ್ಪನವರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ’ ಎಂದು ಬಿಜೆಪಿ ಪ್ರತಿಪಾದಿಸಿದೆ.