ಬೆಂಗಳೂರು: ಕೊರೋನಾ ಸಂಕಟದ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಭರ್ಜರಿ ವಿದ್ಯಮಾನಗಳು ಗರಿಗೆದರಿವೆ. ಜಿಂದಾಲ್ ಕಂಪನಿಗೆ ಜಮೀನು ಮಂಜೂರಾತಿ ವಿಚಾರದಲ್ಲಿ ಬಿಜೆಪಿ ನಾಯಕರೇ ಬಿಎಸ್‌ವೈ ವಿರುದ್ದ ಮುನಿಸಿಕೊಂಡಿದ್ದು ಈ ಸಂಬಂಧದ ದೂರು ಹೈಕಮಾಂಡ್ ಬಳಿ ತಲುಪಿದೆ.
ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿರುವ ಸಿಎಂ ಪುತ್ರ ವಿಜಯೇಂದ್ರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆ ಕೆಲ ದಿನಗಳ ಹಿಂದೆ ದೆಹಲಿಗೆ ದೌಡಾಯಿಸಿ ವರಿಷ್ಠರ ಮುಂದೆ ಸಮಜಾಯಿಷಿ ನೀಡಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ನಾಯಕತ್ವ ಬದಲಾವಣೆ ಆಗುವುದೇ ಆದರೆ, ತಮ್ಮನ್ನು ಡಿಸಿಎಂ ಅಥವಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವಂತೆ ತಮ್ಮ ಆಪ್ತ ನಾಯಕರ ಮೂಲಕ ಲಾಭಿ ನಡೆಸಿದ್ದಾರೆಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಈ ಬೆಳವಣಿಗೆಯ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಡೆಸಿದ ಚರ್ಚೆ ಕುತೂಹಲದ ಕೇಂದ್ರಬಿಂದುವಾಯಿತು.
ರಾಜಕೀಯವಲ್ಲ, ಸಾಮಾಜಿಕ ಅಸ್ಮಿತೆ
ಬಿಎಸ್‌ವೈ-ನಳಿನ್ ನಡುವೆ ರಾಜಕೀಯ ನಡೆ ಕುರಿತ ಚರ್ಚೆಯ ಸಾದ್ಯತೆಗಳ ಬಗ್ಗೆ ಎಲ್ಲರಿಗೂ ಕುತೂಹಲವಿತ್ತದರೂ ಈ ಭೇಟಿ ಸಂದರ್ಭದಲ್ಲಿ ನಡೆದದ್ದೇ ಬೇರೆ ಎನ್ನುತ್ತಿದೆ ನಳಿನ್ ಆಪ್ತವಲಯ. ರಾಜ್ಯದಲ್ಲಿ ಕೊರೋನಾ ಕೇಕೆ ಮುಂದುವರಿದಿದ್ದು ಸೋಂಕಿನ ಸಂಕೋಲೆ ತುಂಡರಿಸಲು ರಾಜ್ಯ ಸರ್ಕಾರ ಲಾಕ್‌ಡೌನ್ ಮಾದರಿಯ ಕಠಿಣ ನಿಯಮ ಜಾರಿಗೊಳಿಸಿದೆ. ಇದೇ ವೇಳೆ ಬಿಜೆಪಿ ಪಕ್ಷದ ವತಿಯಿಂದ ರಾಜ್ಯವ್ಯಾಪಿ 250 ಸಹಾಯ ಕೇಂದ್ರಗಳ ಮೂಲಕ ಕೋವಿಡ್ ರೋಗಿಗಳಿಗೆ ನೆರವಾಗುತ್ತಿದೆ. ಈ ವಿಷಯಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾಹಿತಿ ಹಂಚಿಕೊಂಡರೆಂದು ಅವರ ಆಪ್ತ ವಲಯ ತಿಳಿಸಿದೆ.
ಬಿಜೆಪಿ ಪಕ್ಷದ ವತಿಯಿಂದ ಕೋವಿಡ್ ಕೇರ್ ಕಾರ್ಯ ನಡೆಯುತ್ತಿದ್ದು ಇದರ ಜೊತೆಯಲ್ಲೇ ರಾಜ್ಯ ಸರ್ಕಾರವೂ ಸಂಕಷ್ಟದಲ್ಲಿರುವವರಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ನಳಿನ್ ಸಲಹೆ ಮಾಡಿದರು. ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಬೇಕೆಂದೂ ಸಿಎಂಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ನಳಿನ್ ಕುಮಾರ್ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರನ್ನು ಭೇಟಿಯಾಗಿ ರಾಜ್ಯದ ಕೋವಿಡ್ ಸ್ಥಿತಿಗಳ ಕುರಿತು ಚರ್ಚಿಸಿ,
ಬಿಜೆಪಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಕೋವಿಡ್ ನೆರವಿನ ‘ಸೇವೆಯೇ ಸಂಘಟನೆ – 2.0’ ಪರಿಹಾರ ಕಾರ್ಯಗಳ ವಿವರಗಳನ್ನು ತಿಳಿಸಿ, ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಬೇಕೆಂದು ಮನವಿ ಮಾಡಲಾಯಿತು. pic.twitter.com/eRArAqQ6bP— Nalinkumar Kateel (@nalinkateel) May 10, 2021
ಏನಿದಿ ಬಿಜೆಪಿ ಕೋವಿಡ್ ಕೇರ್?
ರಾಜ್ಯದ 37 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ 250 ಸಹಾಯ ಕೇಂದ್ರಗಳನ್ನು ಬಿಜೆಪಿ ತೆರೆದಿದ್ದು, ಕಾರ್ಯಕರ್ತರು ನಡೆಸುತ್ತಿರುವ ಸೇವಾ ಚಟುವಟಿಕೆಗಳ ವಿವರಗಳ ಬಗ್ಗೆ ನಳಿನ್ ಕುಮಾರ್ ಅವರು ಬಿಎಸ್‌ವೈ ಜೊತೆ ಮಾಹಿತಿ ಹಂಚಿಕೊಂಡರು.
ರಾಜ್ಯದ 37 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ 250 ಸಹಾಯ ಕೇಂದ್ರಗಳಲ್ಲಿ 13 ರೀತಿಯ ಸೇವೆಗಳ ಮುಖಾಂತರ ರಾಜ್ಯದ ಜನತೆಯ ಸೇವೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ ಎಂದವರು ಮುಖ್ಯಮಂತ್ರಿಯವರ ಗಮನಸೆಳೆದರು.