ಬೆಂಗಳೂರು: ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣಕ್ಕೆ ಮರು ಜೀವ ಸಿಗುತ್ತಿದ್ದಂತೆಯೇ ಬಿಜೆಪಿ ಪಾಲಯದಲ್ಲೂ ಸಂಚಲನ ಉಂಟಾಗಿದೆ. ಒಂದೆಡೆ ಸಂಪುಟ ಪುನಾರಚನೆಗೆ ಕಸರತ್ತು ನಡೆದರೆ ಇನ್ನೊಂದೆಡೆ ಡಿನೋಟಿಫಿಕೇಷನ್ ಆರೋಪದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕೆಂದು ಪ್ರತಿಪಕ್ಷಗಳು ಒತ್ತಡ ಹಾಕುತ್ತಿವೆ. ಆದರೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾತ್ರ ನಿಗೂಢವಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಐಎಡಿಬಿ ಜಮೀನಿನ ಡಿನೋಟಿಫಿಕೇಷನ್ ಆರೋಪದ ತನಿಖೆಯ ರದ್ದತಿಗೆ ರಾಜ್ಯ ಹೈಕೋರ್ಟ್ ನಿರಾರಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ರಾಜೀನಾಮೆ ನೀಡಿ ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಕಾನೂನುಬಾಹಿರವಾಗಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳು Cognizable offence ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಡಿಸೆಂಬರ್ 22ರ ಆದೇಶದಲ್ಲಿ ಹೈಕೋರ್ಟ್ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿರುವ ಸಿದ್ದರಾಮಯ್ಯ, ಕೆಐಎಡಿಬಿ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾತ್ರದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2015ರಲ್ಲಿ ಎಫ್ ಐ ಆರ್ ಸಲ್ಲಿಸಿದ್ದು, ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ಕೂಡಾ ನಡೆಸಿತ್ತು. ಇದರಲ್ಲಿ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯಾಗಿ ಮಾಡಿದ್ದರು ಎಂದು ಗಮನಸೆಳೆದರು.
ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ದೂರು ದಾಖಲಿಸಿರುವುದು ಕಾನೂನುಬಾಹಿರ ಕ್ರಮವಾಗಿರುವ ಕಾರಣ ಪ್ರಕರಣವನ್ನು ರದ್ದುಪಡಿಸಬೇಕೆಂಬ ಬಿ.ಎಸ್.ಯಡಿಯೂರಪ್ಪನವರ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿರುವುದರಿಂದ ಯಡಿಯೂರಪ್ಪನವರಿಗೆ ರಾಜೀನಾಮೆ ಹೊರತು ಬೇರೆ ದಾರಿ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಣೆ ಮಾಡಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ತನ್ನ ಅಧಿಕಾರದ ಬಲದಿಂದ ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆಗಳಿವೆ. ತಾವು ಮುಖ್ಯಮಂತ್ರಿಯಾದ ಕೂಡಲೇ ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ಪಡೆದಿರುವುದೇ ಇದಕ್ಕೆ ಸಾಕ್ಷಿ ಎಂದ ಸಿದ್ದರಾಮಯ್ಯ, ಡಿನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಸಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳು ತನ್ನ ಆದೇಶದಲ್ಲಿ ತಿಳಿಸಿರುವುದು ಬಿ.ಎಸ್.ಯಡಿಯೂರಪ್ಪನವರು ತನಿಖೆ ಮೇಲೆ ಪ್ರಭಾವ ಬೀರಬಹುದೆನ್ನುವ ಗುಮಾನಿಯೂ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ‘ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದು ಘೋಷಿಸಿದ್ದ ಪ್ರಧಾನಿ ನರೇಂದ್ರಮೋದಿಯವರಿಗೆ ಅವರದ್ದೇ ಪಕ್ಷದ ಮುಖ್ಯಮಂತ್ರಿಯವರ ಮೇಲಿನ ಈ ಗಂಭೀರ ಆರೋಪ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.