ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು 78ನೇ ಜನ್ಮದಿನವನ್ನು ಆಚರಿಸುತ್ತಿದ್ದು, ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ತ ವಿಜಯೇಂದ್ರ ಹಾಗೂ ಕುಟುಂಬದ ಸದಸ್ಯರು ಯಡಿಯೂರಪ್ಪ ಅವರಿಗಾಗಿ ವಿವಿಧ ಕೈಂಕರ್ಯ ನೆರವೇರಿಸಿ ಗಮನಸೆಳೆದರು.
ಬಿಎಸ್‌ವೈ ಅವರ ಹುಟ್ಟು ಹಬ್ವದ ಅಂಗವಾಗಿ ಬೆಳಿಗ್ಗೆ ಬೆಂಗಳೂರಿನ ಸಂಜಯ ನಗರದಲ್ಲಿರುವ ರಾಧಾಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಡಿಯೂರಪ್ಪ ನವರು ನಾಡಿನ ಒಳಿತು, ರೈತರ ಬದುಕು ಹಸನಾಗಲಿ ಎಂದು ಅವರ ಆಪ್ತರು ದೇವರಲ್ಲಿ ಪ್ರಾಥನೆ ಸಲ್ಲಿಸಿದರು. ಸಚಿವರಾದ ಬಿ.ಎ.ಬಸವರಾಜ, ವಿ.ಸೋಮಣ್ಣ, ಬಿಡಿಎ ಅಧ್ಯಕ್ಷ ಎಸ್ ಅರ್ ವಿಶ್ವನಾಥ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 78ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ವಿಶಿಷ್ಟ ಹಾರ, ರೇಷ್ಮೆ ಝರಿ ಶಾಲು ಹೊದಿಸಿ, ಸನ್ಮಾನಿಸಿ ಶುಭಾಶಯ ಕೋರಿದರು.
ಬಿಡಿಎ ಅಧ್ಯಕ್ಷ ಎಸ್.ಅರ್.ವಿಶ್ವನಾಥ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಕೆ.ಅರ್.ಐ.ಡಿ.ಎಲ್ ಅಧ್ಯಕ್ಷ ಎಮ್.ರುದ್ರೇಶ್ ಸಹಿತ ನಾಯಕರು ಸಿಎಂಗೆ ಶುಭ ಹಾರೈಸಿದರು