ಬೆಂಗಳೂರು: ಬಿಎಂಟಿಸಿ ಲಾಭದಲ್ಲಿದೆ ಎಂದು ಕಾಂಗ್ರೆಸ್ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯ ಟ್ವೀಟ್‌ಗೆ ತಮ್ಮದೇ ದಾಟಿಯಲ್ಲಿ ಉತ್ತರ ನೀಡೊರುವ ರಾಮಲಿಂಗಾರೆಡ್ಡಿ, ‘ಸಾಮಾನ್ಯ ಜ್ಞಾನವೇ ಇಲ್ಲದವರೊಂದಿಗೆ ಪ್ರತಿದಿನ ಅವರು ಮಾಡುವ ಟ್ಟೀಟ್‌ಗಳಿಗೆ ಉತ್ತರ ಕೊಡಬೇಕಾಗಿದೆಯಲ್ಲ ಎಂಬುದು ದುರಂತ. ಆದರೂ ನಮ್ಮ ಜವಾಬ್ದಾರಿಯಿಂದ ನಾವು ನುಳುಚಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಕರ್ನಾಟಕ ಸರ್ಕಾರವು 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಅರಿವು ಕೂಡ ಇವರಿಗೆ ಇಲ್ಲವಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಾರಿಗೆ ಸಂಸ್ಥೆಗಳ ಅಭಿವೃದ್ಧಿಯ ಎರಡು ಪ್ರಮುಖ ಅಂಗಗಳು ಕಾರ್ಮಿಕರು ಹಾಗೂ ಬಸ್ಸುಗಳು. ದುರಾದೃಷ್ಟವೆಂದರೆ, ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರವು ಸಾರಿಗೆ ಸಂಸ್ಥೆಗಳಲ್ಲಿ 8900 ಖಾಯಂ ನೇಮಕಾತಿಗೆ ಚಾಲನೆ ನೀಡಿ,ಈಗಾಗಲೇ 1883 ಚಾಲಕ/ ನಿರ್ವಾಹಕ/ತಾಂತ್ರಿಕ ಸಿಬ್ಬಂದಿಗಳ ಹುದ್ದೆ ಭರ್ತಿ ಮಾಡಿದೆ ಎಂದು ತಿಳಿಸಿರುವ ಸಾರಿಗೆ ಸಚಿವರು, ಸಂಸ್ಥೆಗಳಿಗೆ ಡಕೋಟಾ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಬಿ.ಜೆ.ಪಿ ಅವರಿಗೆ ಸಲ್ಲಬೇಕು. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆ ಆಗಿಲ್ಲ, ಕಳೆಪ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 1300 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಾರಿಗೆ ಸಂಸ್ಥೆಗಳಲ್ಲಿ 5900 ಹೊಸ ಬಸ್ಸುಗಳ ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಕಳೆದ 1 ವರ್ಷದಲ್ಲಿ ನಾಲ್ಕು ನಿಗಮಗಳಲ್ಲಿ 3000 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಡೀಸೆಲ್ ತೈಲದ ಬೆಲೆ ಹೆಚ್ಚಳದಿಂದ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ರೂ. 473.28 ಕೋಟಿ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಹೆಚ್ಚಳ ರೂ.556.59 ಕೋಟಿ ಸೇರಿ ಒಟ್ಟಾರೆ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ಹೆಚ್ಚಳವಾಗಿರುವ ಅಂದಾಜು ಮೊತ್ತ ರೂ.1029.87 ಕೋಟಿಗಳಾಗುತ್ತದೆ ಎಂದಿದ್ದಾರೆ.
ತೈಲದ ಪ್ರತಿ ಲೀಟರ್‌ಗೆ ಸರಾಸರಿ ರೂ 62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ ಏರಿಕೆಯಾಗಿತ್ತು. ಹಾಲಿ ಕರಾರಸಾ ನಿಗಮಕ್ಕೆ ರೂ 85.80 ಡೀಸೆಲ್ ದರವಿದೆ. ಬಿ.ಎಂ.ಟಿ.ಸಿಯಲ್ಲಿ 2015 ರಲ್ಲಿ ಬಸ್ ದರ ಏರಿಕೆಯಾಗಿದ್ದಾಗ ಡೀಸೆಲ್ ದರ ರೂ.53.35 ಆಗಿತ್ತು. ಡೀಸೆಲ್ ದರ ಏರಿಸಿದ ಕೀರ್ತಿ ಕೂಡ ಬಿ.ಜೆ.ಪಿ ಅವರಿಗೆ ಸಲ್ಲಬೇಕು ಎಂದು ಎದಿರೇಟು ನೀಡಿದ್ದಾರೆ.
2023 ರಲ್ಲಿ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡದೆ ಸಿಬ್ಬಂದಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಹೋಗಿದ್ದಾರೆ. ವೇತನ ಪಾವತಿಗೂ ಹಣವಿಲ್ಲದೆ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದು ಬಿಜೆಪಿ ಸರ್ಕಾರದ ಅವಧಿಯ ಲೋಪದತ್ತ ಬೊಟ್ಟು ಮಾಡಿದ್ದಾರೆ.
ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ, ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು ಎಂದು ರಾಮಲಿಂಗಾರೆಡ್ಡಿ ರೆಡ್ಡಿ ಸ್ಪಷ್ಟನೆ ನೀಡದ್ದಾರೆ.
2020ರಲ್ಲಿ ರೀ.1569 ಕೋಟಿ, 2021ರಲ್ಲಿ ರೂ.2037 ಕೋಟಿ, 2022ರಲ್ಲಿ ರೂ 3349 ಕೋಟಿ,
2023ರಲ್ಲಿ 3930 ಕೋಟಿ ರೂ ಕೆ ಎಸ್ ಆರ್ ಟಿ ಸಿ ಆದಾಯ ಗಳಿಸಿದೆ.
ಲಾಭಕ್ಕೂ ಆದಾಯ ಗಳಿಕೆಗೂ ವ್ಯತ್ಯಾಸವೇ ತಿಳಿಯದ ಅಧಮರು ಇವರು ಎಂದಿರುವ ರಾಮಲಿಂಗಾರೆಡ್ಡಿ ಸಾರಿಗೆ ಸಂಸ್ಥೆಗಳನ್ನು ರು.5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಇವರಿಗೆ, ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂಬುದೇ ತಿಳಿಯದಾಗಿದೆ. ಇವರಿಗೆ ಆತ್ಮ ಸಾಕ್ಷಿಯೇ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.