ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ಈ ಟಿಕೆಟ್ ನೀಡಿರುವುದು ಮುನ್ನಡಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಕೋರೊನಾ ಸಮಯದಲ್ಲಿ 2200 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ ಎಂದು ಟೀಕಿಸಿದರು.
ಒಬ್ಬ ಸಾಮಾನ್ಯ ವ್ಯಕ್ತಿ ಮೇಲೆ ಸೋತ ವ್ಯಕ್ತಿಗೆ, ಟ್ಯೂಷನ್ ಟೀಚರ್ ವಿರುದ್ಧ ಸೋತ ವ್ಯಕ್ತಿಗೆ ಏಕೆ ಟಿಕೆಟ್ ನೀಡಿದರು ಎನ್ನುವುದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ಧೀರ್ಘ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್ ಸಿಕ್ಕಿರಬಹುದು ಎಂದವರು ತಿಳಿಸಿದರು.
ಸಾಮಾನ್ಯ ಮನುಷ್ಯನಾದ ನಾನು ನನ್ನ ಎಲ್ಲಾ ವ್ಯವಹಾರ, ಗಳಿಕೆ, ಖರ್ಚು ಸೇರಿದಂತೆ ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ. ನಿಮಗೆ ಆ ಧೈರ್ಯ ಇದೆಯೇ? ಸಂಸತ್ತು ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ನಿಮ್ಮನ್ನು ನಾವು ಹೋಗಲು ಬಿಡುವುದಿಲ್ಲ. ಇಡೀ ಕೇಂದ್ರ ಸರ್ಕಾರವೇ ಬಂದು ನಿಂತುಕೊಂಡರೂ ಸುಧಾಕರ್ ಅವರು ಸಂಸತ್ತಿನ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ ಎಂದರು.
ಇದು ಆಕ್ರೋಶದ ಮಾತಲ್ಲ ಮಧ್ಯಮ ವರ್ಗದ ಹುಡುಗನೊಬ್ಬನ ಮಾತು. ಸಾರ್ವಜನಿಕ ಜೀವನದಲ್ಲಿ ನಿಮ್ಮನ್ನು ನೂರಾರು ಜನ ತೆಗಳುತ್ತಾರೆ, ಹೊಗಳುತ್ತಾರೆ ಆದನ್ನು ಸ್ವೀಕರಿಸುವ ಮನೋಭಾವ ಇರಬೇಕು. ನನಗೂ ಸಹ ಅನೇಕ ಜನ ಕೆಟ್ಟದಾಗಿ ಬೈಯ್ಯುತ್ತಾರೆ. ಆದರೆ ನಾನು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ 22 ಪ್ರಕರಣ ದಾಖಲಿಸಿದರು. 10 ಸಾವಿರ ಜನ ಬಂದು ನನ್ನನ್ನು ಬಿಡುಗಡೆ ಮಾಡಿಸಿದರು. ನನ್ನ ಮೇಲೆ ಇಲ್ಲಸಲ್ಲದ ಕೇಸ್ಗಳನ್ನು ಹಾಕಿಸಿದರು. ನಾನು ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡಿ ಬೇಲ್ ದೊರೆಯುವಂತೆ ಮಾಡಿಕೊಳ್ಳುತ್ತೇನೆ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿ ಅಚಾನಕ್ ಆಗಿ ಗೆದ್ದರೆ ಎಂದು ಸಾಂದರ್ಬಿಕವಾಗಿ ಹೇಳುತ್ತಿದ್ದೇನೆ. ಈ ವ್ಯಕ್ತಿ ಗೆಲ್ಲಲ್ಲ, ಗೆಲ್ಲಬಾರದು ಎಂದ ಅವರು, ಸುಧಾಕರ್ ಅವರು ಗೆದ್ದರೆ ಕೇಂದ್ರದ ಬಿಜೆಪಿಯ ಮಂತ್ರಿಗಳಿಗೂ ಇವರು ಒಂದಷ್ಟು ಆಸನಗಳನ್ನು ಕಲಿಸುತ್ತಾರೆ. ಒಂದಷ್ಟು ಜನರ ಆತ್ಮ ಸಂತೋಷ, ಆತ್ಮ ತೃಪ್ತಿಗೆ ಕೆಲಸ ಮಾಡುತ್ತಾರೆ. ಇದಾದ ನಂತರ ರಾಜ್ಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ಇರುವುದಿಲ್ಲ ಎಂದರು.