ದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದೇಶದ ರಾಜಕೀಯದಲ್ಲಿ ಕುತೂಹಲದ ಕೇಂದ್ರಬಿಂದುವಾಯಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ಉಸ್ತುವಾರಿ ಹೊತ್ತಿದ್ದ ಆರೆಸ್ಸೆಸ್ ನಾಯಕರ ಪಾಲ್ಗೊಳ್ಳುವಿಕೆ ಗಮನಸೆಳೆಯಿತು. ಉತ್ತರಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಾದ ನಂತರ ಕರ್ನಾಟಕ ಸಹಿತ ಇನ್ನೂ ಕೆಲವು ರಾಜ್ಯಗಳಲ್ಲೂ ಮಿನಿಮಹಾಸಮರ ನಡೆಯಲಿದೆ. ಹಾಗಾಗಿ ಪಕ್ಷದ ಬಲವರ್ಧನೆಗಾಗಿ ಬದಲಾವಣೆ ಮಾಡುವ ಬಗ್ಗೆ ವರಿಷ್ಠರು ಸುಳಿವು ನೀಡಿದ್ದಾರೆ.
ಕರ್ನಾಟಕದ ಪಾಲಿಗೂ ಈ ಕಾರ್ಯಕಾರಿಣಿ ಭಾರೀ ಮಹತ್ವದ್ದಾಗಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ರಾಜ್ಯ ಸರ್ಕಾರ ಬದಲಾಗಿದೆ. ಇದೇ ವೇಳೆ ಕೆಲ ದಿನಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ನಿರೀಕ್ಷಿತ ಜಯ ಸಿಗದಿರುವುದು, ಅದೇ ಹೊತ್ತಿಗೆ ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಧುರೀಣರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಬೆಳವಣಿಗೆಗಳ ನಡುವೆ ಈ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದೆ.
ಈ ನಡುವೆ, ರಾಜ್ಯದಲ್ಲೂ ಭಾರೀ ಬದಲಾವಣೆಗೆ ರಾಷ್ಟ್ರೀಯ ವರಿಷ್ಠರು ಮುಂದಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯ ನಿರ್ಣಯಗಳು ಹಾಗೂ ಮುಂದಿನ ವಿದ್ಯಮಾನಗಳು ರಾಜ್ಯದ ಪಾಲಿಗೂ ಕುತೂಹಲದ ಸಂಗತಿಯೆನಿಸಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಿಂದ ರಾಜ್ಯದ ಅಪೇಕ್ಷಿತ ಮುಖಂಡರು ಇಂದು ವೆಬೆಕ್ಸ್ ಮೂಲಕ ಭಾಗವಹಿಸಿದ್ದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದ ಉಮೇಶ್ ಜಾಧವ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥನಾರಾಯಣ್, ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.