ಮಂಗಳೂರು: ಆರೆಸ್ಸೆಸ್ ಬಗ್ಗೆ ಟೀಕಿಸಿರುವ ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಮೊದಲು ಒಂದು ವಾರ ಶಾಖೆಗೆ ಬಂದು ಆರೆಸ್ಸೆಸ್ ಬಗ್ಗೆ ತಿಳಿದುಕೊಳ್ಳಲಿ ಎಂದು ಅವರು ಸಲಹರ ಮಾಡಿದ್ದಾರೆ.
ಇತ್ತೀಚೆಗೆ ಕುಮಾರ ಸ್ವಾಮಿ ಅವರು ಆರೆಸ್ಸೆಸ್ ಬಗ್ಗೆ ನೀಡಿದ ಹೇಳಿಕೆ ಕುರಿತಂತೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಕಾಮಲೆ ರೋಗಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರೆಸ್ಸೆಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಆರೆಸ್ಸೆಸ್ ರಾಷ್ಟ್ರ ಭಕ್ತಿ,ದೇಶ ಸೇವೆಗೆ ಇನ್ನೊಂದು ಹೆಸರು. ಕುಮಾರ ಸ್ವಾಮಿ, ಕುಟುಂಬ ರಾಜಕಾರಣ, ಜಾತಿ ರಾಜಕಾರಣ ನಡೆಸುತ್ತಾ ಬಂದವರು. ತಮ್ಮ ಕುಟುಂಬ, ಜಾತಿಯವರನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಬಂದವರು ಎಂದರು.
ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾರವರು ಆರೆಸ್ಸೆಸ್ ಮೂಲಕ ಬಂದವರು ಎಂದು ಮನವರಿಕೆ ಮಾಡಿದ ನಳಿನ್, ದೇಶದ ಜನರಲ್ಲಿ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ ಮಾಡುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಾ ಬಂದಿದೆಯೇ ಹೊರತು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಿಸುವ ಕೆಲಸದಲ್ಲಿ ಆರೆಸ್ಸೆಸ್ ತೊಡಗಿಕೊಂಡಿಲ್ಲ ಎಂದರು.