ಶಿವಮೊಗ್ಗ: ಗ್ರಾಮ ಪಂಚಾಯತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಗೆಲ್ಲಿಸಿ ಯಶಸ್ಸಿನಿಂದ ಬೀಗುತ್ತಿರುವ ಬಿಜೆಪಿ ಇದೀಗ ಜಿಲ್ಲಾ ಪಂಚಾಯತ್ ಸಮರಕ್ಕೆ ರಣವ್ಯೂಹ ರೂಪಿಸುತ್ತಿದೆ. ಗ್ರಾಮ ಪಂಚಾಯತಿ ಕದನದಲ್ಲಿನ ಯಶೋಗಾಥೆ ಮಾದರಿಯಲ್ಲೇ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಯಶಸ್ಸಿಗೆ ಶ್ರಮಿಸಲು ‘ಜನಸೇವಕ್ ಸಮಾವೇಶ’ ಹಮ್ಮಿಕೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕಾರಿಣಿಯ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ‘ಜನಸೇವಕ್ ಸಮಾವೇಶ’ಗಳ ನೇತೃತ್ವಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ. ಮೊದಲನೇ ತಂಡದ ನೇತೃತ್ವವನ್ನು ತಾವೇ ವಹಿಸುವುದಾಗಿ ಹೇಳಿದರು. ಇನ್ನುಳಿದಂತೆ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಡಾ. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲೂ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ನಳಿನ್ ಕುಮಾರ್ ತಿಳಿಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಬಿಜೆಪಿಗೆ ಮತಟ್ಟೆಯಲ್ಲಿ ಭದ್ರ ನೆಲೆಯನ್ನು ಒದಗಿಸಿ ಕೊಟ್ಟಿದೆ. ಯಡಿಯೂರಪ್ಪ ಅವರಂಥ ಉತ್ತಮ ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಇದು. ಹಿರಿಯ ಮುಖಂಡರಾದ ಈಶ್ವರಪ್ಪ, ಡಿ.ಎಚ್.ಶಂಕರಮೂರ್ತಿ ಅವರ ಜೊತೆಗೂಡಿ ಆತ್ಮಾವಲೋಕನ ನಡೆಸಲಾಗಿದೆ ಎಂದು ನಳಿನ್‌ಕುಮಾರ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಪಕ್ಷದ ಅಡಿಪಾಯ ಗಟ್ಟಿಗೊಳಿಸಲು ನೆರವಾದ ಹಿರಿಯರನ್ನು ಸ್ಮರಿಸಲಾಗಿದೆ. ರಾಮ ಮತ್ತು ರೈತನ ಸಂದೇಶವನ್ನು ಈ ಸಭೆಯು ನೀಡಿದೆ. ಇಲ್ಲಿ ಮತ್ತು ಹಿಂದಿನ ಸಭೆಗಳಲ್ಲಿ ಕೊಟ್ಟ ಬ್ಯಾಗ್ ಜೊತೆಗೆ ಮುಖಂಡರು ಮತ್ತು ಕಾರ್ಯಕರ್ತರು ಸಂಘಟನಾ ಪ್ರವಾಸ ಮಾಡಬೇಕು. ಬಾಕಿ ಇರುವ ಅಭ್ಯಾಸ ವರ್ಗಗಳನ್ನು ಮುಗಿಸಬೇಕು ಎಂದವರು ಮುಖಂಡರಿಗೆ ಕರೆ ನೀಡಿದರು.