ಚಿಕ್ಕಬಳ್ಳಾಪುರ: ಈಶ್ವರಪ್ಪ ಸಹಿತ ಹಿರಿಯ ಬಿಜೆಪಿ ನಾಯಕರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವಂತೆಯೇ, ಇದೀಗ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಕೂಡಾ ಅದೇ ಹಾದಿಯನ್ನು ಅನುಸರಿಸಿದ್ದಾರೆ. ಅಚ್ಚರಿಯ ತೀರ್ಮಾನ ಪ್ರಕಟಿಸಿರುವ ಸಂಸದ ಬಿ.ಎನ್.ಬಚ್ಚೇಗೌಡ ಅವರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಈ ನಿರ್ಧಾರ ಘೋಷಿಸಿದ ಬಿ.ಎನ್.ಬಚ್ಚೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ ಎಪ್ಪತ್ತು ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ ಎಂಬತ್ತೊಂದು ವರ್ಷ ವಯಸ್ಸಾಗಿದೆ. ಹಾಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡಾ ಹೇಳಿದ್ದಾರೆ. ಹಾಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.






















































