ಬೆಂಗಳೂರು: ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಹಾಸನ ಹೋಟೆಲ್ ಅಶೋಕದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿಗಾಗಿ ಒಳಜಗಳ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣನ ಗುಂಪು ಡಿಕೆಶಿ ಗುಂಪನ್ನು ಮತ್ತು ಡಿಕೆಶಿ ಗುಂಪು ಸಿದ್ರಾಮಣ್ಣನ ಅಭ್ಯರ್ಥಿಗಳನ್ನು ಸೋಲಿಸಲಿದ್ದಾರೆ. ಬಿಜೆಪಿ ವಿಕಾಸವಾದದ ಮೂಲಕ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಯಾವ ರೈತನ ಖಾತೆಗೂ ಅದು ನೇರವಾಗಿ ಹಣ ಹಾಕಲಿಲ್ಲ. ಹಳ್ಳಿಯ ತಾಯಂದಿರಿಗೆ ಅನಿಲ ಭಾಗ್ಯ ಕೊಟ್ಟಿರಲಿಲ್ಲ. ಅವರ ಖಾತೆಗೆ ಹಣ ಹಾಕಿರಲಿಲ್ಲ. ಇವತ್ತು ಮನೆ ಮನೆಗೆ ಬ್ಯಾಂಕ್ ಖಾತೆ, ಶೌಚಾಲಯ ಸೌಲಭ್ಯ, ಮನೆ ಮನೆಗೆ ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ಭಾಗ್ಯವನ್ನು ನರೇಂದ್ರ ಮೋದಿಯವರ ಸರಕಾರ ಕೊಟ್ಟಿದೆ. ಮನೆ ಮನೆಗೂ ಅದು ನೀರನ್ನು ನೀಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿಂದುಳಿದವರನ್ನು ಮುಂದೆ ತರುವ ಕೆಲಸವನ್ನು ಮೋದಿ ಸರಕಾರ ಮಾಡಿದೆ ಎಂದ ಅವರು, ಹಿಂದಿನ ಕಾಂಗ್ರೆಸ್ ಸರಕಾರ ತುಷ್ಟೀಕರಣದ ರಾಜಕೀಯವನ್ನು ತನ್ನದಾಗಿಸಿಕೊಂಡಿತ್ತು ಎಂದು ವಿವರಿಸಿದರು. ತಿರಂಗಾ ಧ್ವಜಕ್ಕೆ ಜಗತ್ತೇ ಗೌರವ ನೀಡುವ ಕಾಲಘಟ್ಟ ಬಂದಿದೆ ಎಂದರು. ಪಠ್ಯಪುಸ್ತಕದಲ್ಲಿ ಯಾವುದೇ ಮಹಾನ್ ವ್ಯಕ್ತಿಯನ್ನೂ ಕಡೆಗಣಿಸಿಲ್ಲ. ಎಲ್ಲ ಸಮುದಾಯಕ್ಕೂ ಅದು ಗೌರವ ನೀಡಿದೆ ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ನಡೆದಿದೆ. ಕೇದಾರನಾಥ ಜೀರ್ಣೋದ್ಧಾರ ನಡೆಯುತ್ತಿದೆ. ಅಮರನಾಥದ ಕಾರ್ಯ ನಡೆದಿದೆ. ಯೋಗಕ್ಕೆ ಜಗತ್ತಿನ ಮನ್ನಣೆ ಸಿಕ್ಕಿದೆ ಎಂದು ತಿಳಿಸಿದರು. ಆಯುರ್ವೇದಕ್ಕೆ ದೇಶ ಮತ್ತು ವಿದೇಶಗಳಲ್ಲಿ ಮನ್ನಣೆ ಸಿಗುತ್ತಿದೆ ಎಂದರು. ಭಾರತೀಯ ಸಂಸ್ಕøತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವನ್ನು ತುಷ್ಟೀಕರಣದ ನೀತಿಯನ್ನು ಹೊರಗಿಟ್ಟು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿಯ ವಿಕಾಸವಾದದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಕಾಂಗ್ರೆಸ್‍ನ ವಿನಾಶವಾದ, ಭ್ರಷ್ಟಾಚಾರವಾದದಿಂದ ಆ ಪಕ್ಷದ ಬಗ್ಗೆ ತಿರಸ್ಕಾರ ಹೆಚ್ಚಾಗಿದೆ. ಪರಿವಾರವಾದ, ಕುಟುಂಬವಾದವನ್ನು ಹೊರಗಿಟ್ಟು ಬಿಜೆಪಿ ವಿಕಾಸವಾದವನ್ನು ಮುಂದಿಡುತ್ತಿದೆ. ವಿಕಾಸವಾದ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು. ಜನರಿಗೆ ಇವತ್ತು ಬಿಜೆಪಿ ಬಗ್ಗೆ ಭರವಸೆ ಹೆಚ್ಚಿದೆ. ಈ ದೇಶದಲ್ಲಿ ಸುರಕ್ಷತೆಯಿಂದ ಬದುಕಲು ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ದೊಡ್ಡದು ಎಂದು ಜನರೇ ಹೇಳುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕರೆಗೆ ಜನಸ್ಪಂದನೆ ಸಿಕ್ಕಿತ್ತು. ನಂತರದ ದಿನಗಳಲ್ಲಿ ಮೊದಲ ಬಾರಿಗೆ ಜನತಾ ಕಫ್ರ್ಯೂವನ್ನು ಪ್ರಧಾನಿಯವರು ಕೋವಿಡ್ ಕಾರಣಕ್ಕೆ ಘೋಷಿಸಿದ್ದು, ಈ ದೇಶದ ಜನ ಪೂರ್ಣವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ನರೇಂದ್ರ ಮೋದಿಯವರ ಮೇಲಿನ ವಿಶ್ವಾಸವೇ ಕಾರಣ ಎಂದು ವಿವರಿಸಿದರು.
ಕಳೆದ 8 ವರ್ಷಗಳಲ್ಲಿ ಬಡವರ ಕಲ್ಯಾಣದ ನಾಯಕರಾಗಿ ನರೇಂದ್ರ ಮೋದಿಯವರು ಹೊರಹೊಮ್ಮಿದ್ದಾರೆ. ಪ್ರಧಾನಿಯವರ ನಿರ್ಧಾರದಿಂದ ಕೋವಿಡ್ ಹೋರಾಟದಲ್ಲಿ ನಾವು ಗೆಲುವು ಸಾಧಿಸಿದ್ದು, ಆರೋಗ್ಯ ಕ್ಷೇತ್ರದಲ್ಲೂ ಮೂಲಸೌಕರ್ಯ ವೃದ್ಧಿಯಾಗಿದೆ ಎಂದರು. ದೇಶದ ಎಲ್ಲರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಕೊಡಲಾಗಿದೆ; ಅಲ್ಲದೆ ಆಹಾರ ಭದ್ರತೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಗರೀಬಿ ಹಠಾವೋದಡಿ ಬಡವರ ಬಡತನ ನಿರ್ಮೂಲನೆ ಸಾಧ್ಯವಾಗಲಿಲ್ಲ. ಸೋನಿಯಾ ಗಾಂಧಿ, ರಾಬರ್ಟ್ ವಾಧ್ರಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂಥ ನಾಯಕರ ಕುಟುಂಬದವರು ಶ್ರೀಮಂತರಾದರು ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಅನಗತ್ಯವಾಗಿ ಎಲ್ಲವನ್ನೂ ವಿರೋಧಿಸುತ್ತಿದೆ. ಯುಪಿಎ ನೇತೃತ್ವದ ಡಾ. ಮನಮೋಹನ್ ಸಿಂಗ್ ಸರಕಾರ ಮತ್ತು ಹಿಂದಿನ ಕಾಂಗ್ರೆಸ್ ಸರಕಾರ ಇದ್ದಾಗ 4.5 ಲಕ್ಷ ಕೋಟಿಯ ಭ್ರಷ್ಟಾಚಾರದ ಹಗರಣಗಳು ನಡೆದಿದ್ದವು. ಆಗ ಆಂತರಿಕ ಮತ್ತು ಬಾಹ್ಯವಾಗಿ ರಕ್ಷಣೆ ಇಲ್ಲದ ದಿನಗಳಿದ್ದವು. ಪಾಕಿಸ್ತಾನದ ಸೈನಿಕರು ನಮ್ಮ ನೆಲದಲ್ಲಿ ನಮ್ಮ ಸೈನಿಕರ ರುಂಡವನ್ನು ಚೆಂಡಾಡಿದಾಗ ಮೌನವಾಗಿದ್ದ ಪ್ರಧಾನಿ ಆಗ ಇದ್ದರು. ಈಗ ಸರ್ಜಿಕಲ್ ಸ್ಟ್ರೈಕ್ ಮೂಲಕ ಅಂಥ ಭಯೋತ್ಪಾದನೆಗೆ ಉತ್ತರ ಕೊಡುವ ನಮ್ಮ ಪ್ರಧಾನಿಯವರ ಆಡಳಿತಕ್ಕೂ ಹಿಂದಿನ ಆಡಳಿತಕ್ಕೂ ಇರುವ ವ್ಯತ್ಯಾಸವನ್ನು ಜನರು ಕಂಡಿದ್ದಾರೆ ಎಂದರು.
ಹಿಂದಿನ ಸಿದ್ದರಾಮಯ್ಯ ಅವರ ಸರಕಾರದಲ್ಲೂ ಹತ್ತಾರು ಹಗರಣಗಳು ಆಗಿದ್ದವು. ಅವುಗಳ ತನಿಖೆ ಮಾಡಿರಲಿಲ್ಲ. ಆದರೆ, ಬೊಮ್ಮಾಯಿಯವರ ಸರಕಾರ ಹಗರಣಗಳ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತಿದೆ ಎಂದು ಅಭಿನಂದಿಸಿದರು.
ಜಾತಿ, ಮತ, ಪಂಥವನ್ನು ಮೀರಿ ಬಿಜೆಪಿ ಬೆಳೆದಿದೆ. ಹಿಂದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ರಾಷ್ಟ್ರಪತಿಗಳ ಸ್ಥಾನ ನೀಡಿದ್ದು, ಇದೀಗ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಏರಿಸಲು ಅದು ಮುಂದಾಗಿದೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಸದಾ ಗೌರವ ನೀಡಿದೆ. ಜನಮಾನಸದಲ್ಲಿ ಅದು ಅಭೂತಪೂರ್ವವಾದ ವಿಶ್ವಾಸವನ್ನು ಗಳಿಸಿದೆ ಎಂದು ವಿಶ್ಲೇಷಿಸಿದರು.
ಕುಟುಂಬ ರಾಜಕೀಯ, ಜಾತಿ ರಾಜಕೀಯದಲ್ಲಿ ಬಹಳ ವರ್ಷಗಳಿಂದ ಸಿಲುಕಿದ್ದ ಹಾಸನ ಜಿಲ್ಲೆಯು ಇವತ್ತು ಅದ್ಭುತವಾಗಿ ನಮ್ಮ ಸಂಘಟನೆ ಶಕ್ತಿ ಬೆಳೆಯುತ್ತಿದೆ. ಕಮಲ ಇಲ್ಲಿ ಅರಳುತ್ತಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ನಮ್ಮ ಶಕ್ತಿ ವೃದ್ಧಿಸಲು ಕೆಲಸ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು. ಹಾಸನ ಜಿಲ್ಲೆಯಲ್ಲಿ 5 ಸ್ಥಾನ ಪಡೆಯಲಿದ್ದೇವೆ. ಮಂಡ್ಯ ಜಿಲ್ಲೆಯಲ್ಲೂ ನಮ್ಮ ಶಕ್ತಿ ವೃದ್ಧಿ ಆಗಲಿದೆ. ಹಳೆ ಮೈಸೂರು ಭಾಗದಲ್ಲೂ ಪಕ್ಷದ ಬಲ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿ.ಬಿ.ಶಿವಪ್ಪ ಅವರಿಂದ ಪಕ್ಷಕ್ಕೆ ಕೊಡುಗೆ ದೊಡ್ಡದು ಎಂದು ನೆನಪಿಸಿದರು. ಹಾಸನ ಜಿಲ್ಲೆ ಬಿಜೆಪಿಗೆ ಶಕ್ತಿ ತುಂಬಿದೆ. ಈ ಜಿಲ್ಲೆ ಒಂದು ಕುಟುಂಬಕ್ಕೆ ಸೀಮಿತವಲ್ಲ. ಇದು ರಾಷ್ಟ್ರೀಯ ವಿಚಾರಧಾರೆಗಳಿಗೆ ಶಕ್ತಿ ತುಂಬುತ್ತ ಬಂದಿದೆ. ಅದಕ್ಕಾಗಿ ಇಲ್ಲಿಂದಲೇ ನಮ್ಮ ವಿಜಯಯಾತ್ರೆ ಪ್ರಾರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಹಾಸನಾಂಬೆಗೆ ನಮಿಸಿ ನಮ್ಮ ಕಾರ್ಯಶಕ್ತಿಯನ್ನು ವೃದ್ಧಿ ಮಾಡಬೇಕು. ವಾಸ್ತುಶಿಲ್ಪಕ್ಕೆ ಶಕ್ತಿ ತುಂಬಿದ ಪ್ರದೇಶವಿದು. ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಸಂಕಲ್ಪ ಮಾಡುವುದು ಮತ್ತು ಮುಂದಿನ ಕಾರ್ಯಯೋಜನೆಗಳನ್ನು ಇಲ್ಲಿ ಚರ್ಚಿಸಲಾಗುವುದು ಎಂದರು. ಜಪಾನ್‍ನ ಮಾಜಿ ಪ್ರಧಾನಿ ಹಾಗೂ ಭಾರತದ ಬಗ್ಗೆ ಅಪಾರ ಗೌರವ- ಅಭಿವೃದ್ಧಿಯ ಕಳಕಳಿ ಹೊಂದಿದ್ದ ಶಿಂಜೊ ಅಬೆ ಅವರ ಹತ್ಯೆಯನ್ನು ಖಂಡಿಸಿ, ಅವರ ನಿಧನಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದರು.