ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಗರಣದಲ್ಲಿ ಸೀಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸಲುದ್ದೇಶಿಸಿರುವ ಬೆಂಗಳೂರು-ಮೈಸೂರು ಉದ್ದೇಶಿತ ಪಾದಯಾತ್ರೆಯಿಂದ ಮಿತ್ರಪಕ್ಷ ಬಿಜೆಪಿ ದೂರ ಉಳಿಯಲಿದೆ. ಈ ಸಂಬಂಧ ಜೆಡಿಎಸ್ ಹಿರಿಯ ನಾಯಕರೂ ಆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯಲ್ಲಿ ಅಚ್ಚರಿಯ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ನವದೆಹಲಿಗೆ ತೆರಳಿದ ಕುಮಾರಸ್ವಾಮಿ, ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದ ನಿಲುವನ್ನು ಪ್ರಕಟಿಸಿದರು. ಭಾರೀ ಮಳೆಯಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಪಾದಯಾತ್ರೆ ನಡೆಸುವುದು ಸೂಕ್ತ ಅಲ್ಲ. ಹಿಂದೆ ಸರಿದಿದ್ದೇವೆ ಎಂದ ಅವರು, ಪಾದಯಾತ್ರೆ ವಿಚಾರದಲ್ಲಿ ಬಿಜೆಪಿ ನಾಯಕರು ನಮ್ಮ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಪ್ರತಿಭಟನೆಯ ನೇತೃತ್ವವನ್ನು ಹಾಸನ ಜಿಲ್ಲೆಯ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರೀತಂ ಗೌಡರ ಬಗ್ಗೆ ಅಸನಾಧಾನ ಹೊರಹಾಕಿದರು. ತಮ್ಮ ಪಕ್ಷ ಈ ಪಾದಯಾತ್ರೆಗೆ ನೈತಿಕ ಬೆಂಬಲವನ್ನೂ ನೀಡಲ್ಲ ಎಂದು ತಿಳಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಲು ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಆಯ್ಕೆ ಮಾಡಿದ ಬಿಜೆಪಿಯ ಕ್ರಮದಿಂದ ನೋವಾಗಿದೆ ಎಂದ ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನು ಮುಗಿಸಲು ಪ್ರೀತಂ ಗೌಡ ಮುಂದಾಗಿದ್ದಾರೆ. ನನ್ನ ಕುಟುಂಬಕ್ಕೆ ವಿಷ ಹಾಕಿದ ವ್ಯಕ್ತಿ. ಪೆನ್-ಡ್ರೈವ್ ವಿತರಣೆಯ ಹೊಣೆಗಾರ. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪಾದಯಾತ್ರೆಗೆ ಬೆಂಬಲ ಕೋರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.