ಬಿಟ್ ಕಾಯಿನ್ ಹಗರಣದ ಶ್ರೀಕಿಯನ್ನು ಹಾವೇರಿಗೆ ಚುನಾವಣಾ ಪ್ರಚಾರಕ್ಕೆ ಕರೆದೊಯ್ದರೆ ಒಳ್ಳೆಯದು; ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ನಾಯಕರ ಸಲಹೆ
ಬೆಂಗಳೂರು: ಪಿಎಸ್ ಐ ಹಗರಣದ ಎಲ್ಲಾ ಆರೋಪಿಗಳ ಜೊತೆ ಸೇರಿಕೊಂಡು ಬಿಜೆಪಿಯವರು ಸಾಕ್ಷ್ಯ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆಯೇ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಬಿಜೆಪಿಯ ಶಾಸಕರು ಉಭಯ ಸದನಗಳಲ್ಲಿ PSI ಹಗರಣದ ಬಗ್ಗೆ ಧ್ವನಿ ಎತ್ತಿದ್ದರೂ. ಅಂದಿನ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಯಾವುದೇ ಹಗರಣ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಪ್ರಿಯಾಂಕ್ ಖರ್ಗೆ ಅವರು ದಾಖಲೆಗಳ ಸಮೇತ ಬಯಲು ಮಾಡಿದರು ಎಂದು ಪ್ರಕರಣ ಬಗ್ಗೆ ನೆನಪಿಸಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲೆಲ್ಲಿ ಯಾವ, ಯಾವ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ಎಲ್ಲೆಲ್ಲಿ ನಕಲು ಮಾಡಲು ಅವಕಾಶ ನೀಡಲಾಯಿತು ಎಂದು ಬಯಲು ಮಾಡಿದರು. ಆದರೂ ಬಿಜೆಪಿಯವರು ಇದನ್ನು ಅಲ್ಲಗಳೆದರು. ಆನಂತರ ಮಾಧ್ಯಮಗಳ ಸಹಕಾರದಿಂದ ದಾಖಲೆಗಳನ್ನು ನೀಡಿದಾಗ ಸಿಐಡಿ ತನಿಖೆಗೆ ನೀಡಲಾಯಿತು. ಕಲಬುರ್ಗಿಯ ಎಂಪಿ ಉಮೇಶ್ ಜಾದವ್ ಅವರು ನಕಲು ಕೇಂದ್ರ ಗಳನ್ನು ಸೃಷ್ಟಿ ಮಾಡುವುದರಲ್ಲಿ ಪರಿಣಿತರು. ಅಕ್ರಮ ನಡೆದ ದಿವ್ಯಾ ಹಾಗರಗಿ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಬಹುದು ಎಂದು ಶಿಫಾರಸ್ಸು ಪತ್ರ ನೀಡಿದ್ದರು ಎಂದು ರಮೇಶ್ ಬಾಬು ವಿವರಿಸಿದರು.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/XpPPVorEW4
— Karnataka Congress (@INCKarnataka) April 18, 2024
ಈಕೆ ಮನೆಯಲ್ಲಿ ಅಂದಿನ ಗೃಹ ಸಚಿವರು ದ್ರಾಕ್ಷಿ, ಗೋಡಂಬಿ ತಿಂದು ಬಂದಿದ್ದರು. ಇದನ್ನು ದಾಖಲೆ ಸಮೇತ ಬಹಿರಂಗ ಮಾಡಿದಾಗ ಅದಕ್ಕೆ ಅವರಿಂದ ಸರಿಯಾದ ಉತ್ತರವೇ ಬರಲಿಲ್ಲ ಎಂದ ರಮೇಶ್ ಬಾಬು, ಇಡೀ ರಾಜ್ಯದಲ್ಲಿ 110 ಜನ ಬಂದಿತರಾಗಿದ್ದಾರೆ. ಇದರಲ್ಲಿ ಬಹುತೇಕ ಜನ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಎಂದು ಗಮನಸೆಳೆದರು.
ಪಿಎಸ್ ಐ ಹಗರಣದ ಪ್ರಮುಖ ಆರೋಪಿಗಳ ಜೊತೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಮನೆಗಳಿಗೆ ಹೋಗಿ ಊಟ ಮಾಡುತ್ತಿದ್ದಾರೆ. ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಮನೆಗೂ ತೆರಳಿ ಊಟ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪಿಎಸ್ ಐ ಹಗರಣದ ಎಲ್ಲಾ ಆರೋಪಿಗಳ ಜೊತೆ ಸೇರಿಕೊಂಡು ಬಿಜೆಪಿಯವರು ಸಾಕ್ಷ್ಯ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆಯೇ? ಎಂದು ರಮೇಶ್ ಬಾಬು ಪ್ರಶ್ನಿಸಿದರು.
ಕರ್ನಾಟಕದ ಇತಿಹಾಸದಲ್ಲೇ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿ ಕೆಲಸದಿಂದ ಅಮಾನತು ಮಾಡಲಾಗಿತ್ತು. ಪರೀಕ್ಷೆ ಬರೆದ ಸುಮಾರು 50 ಸಾವಿರ ಯುವಕರಿಗೆ ಮೋಸ ಮಾಡಲಾಗಿತ್ತು. ರಾಜ್ಯಕ್ಕೆ ಕಪ್ಪುಚುಕ್ಕೆ ತಂದವರ ಜೊತೆ ಬಿಜೆಪಿಯವರು ಮೆರವಣೆಗೆ ಮಾಡುವ ಮೂಲಕ ಕಿಂಚಿತ್ತೂ ನೈತಿಕತೆ ಇಲ್ಲದೇ ಓಡಾಡುತ್ತಿದ್ದಾರೆ ಎಂದ ರಮೇಶ್ ಬಾಬು, ಬಿಜೆಪಿಯವರು ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಚುನಾವಣಾ ಬಾಂಡ್ ರೀತಿ ನಾಜೂಕಿನಲ್ಲಿ ಭ್ರಷ್ಟಾಚಾರ ಮಾಡುವುದನ್ನು ಚೆನ್ನಾಗಿ ಕಲಿತಿದ್ದಾರೆ. ನಯವಂಚನೆ ಹೇಗೆ ಮಾಡಬಹುದು ಎಂದು ಮೋದಿ ಸರ್ಕಾರ ಮಾದರಿ ಹಾಕಿಕೊಟ್ಟಿದೆ ಎಂದು ಕುಟುಕಿದರು.
ಬಿಟ್ ಕಾಯಿನ್ ಹಗರಣದ ಶ್ರೀಕಿಯನ್ನು ಬಸವರಾಜ ಬೊಮ್ಮಾಯಿ ಅವರು ಹಾವೇರಿಗೆ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬಂದರೆ ಒಳ್ಳೆಯದು ಎಂಬುದು ನನ್ನ ಸಲಹೆ ಎಂದ ರಮೇಶ್ ಬಾಬು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ತನಿಖೆಗೆ ಆದೇಶ ಮಾಡಿ ನ್ಯಾಯಮೂರ್ತಿ ವೀರಪ್ಪ ಅವರ ಏಕ ಸದಸ್ಯ ಸಮಿತಿ ರಚನೆ ಮಾಡಲಾಗಿತ್ತು. ಇದಕ್ಕೆ ಸಹ ಅರಗ ಜ್ಞಾನೇಂದ್ರ ಅವರು ಅಸಹಕಾರ ನೀಡಿದ್ದಾರೆ. ಅಲ್ಲದೇ ಬಿಜೆಪಿಯವರು ಆಗ ಹಗರಣ ಹೊರಗೆ ಹಾಕಿದ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದರು. ಇದೀಗ ಜಸ್ಟೀಸ್ ವೀರಪ್ಪ ಅವರು ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ತನಿಖೆಗೆ ಸಹಕಾರ ನೀಡಿ ಎಂದರೂ ಸಹಕಾರ ನೀಡದೆ ತನಿಖೆಯ ಹಾದಿಯನ್ನು ತಪ್ಪಿಸಿದ್ದಾರೆ ಎಂದರು.
ಬಿಜೆಪಿ ಈ ರಾಜ್ಯದ ಯುವಕರಿಗೆ ಮೋಸ ಮಾಡಿದೆ. ಉದ್ಯೋಗ ಕಸಿದವರ ಜೊತೆಯೇ ಕಾಣಿಸಿಕೊಂಡು, ಮೆರವಣೆಗೆ ಮಾಡಿ, ಊಟ ಮಾಡಿ ದ್ರೋಹ ಮಾಡಿದ್ದಾರೆ. ಕ್ಷಮೆ ಕೇಳಿ ಎನ್ನುವ ನೈತಿಕತೆಯೂ ಅವರಿಗೆ ಇಲ್ಲ. ಪ್ರಬುದ್ಧ ಮತದಾರರು ಇಂತವರನ್ನು ಆಯ್ಕೆ ಮಾಡದೆ ಉತ್ತರ ನೀಡಬೇಕು. ಪಾಠ ಕಲಿಸಬೇಕು. ಲೋಕಸಭೆ ಚುನಾವಣೆಯಲ್ಲಿ ತಿರಸ್ಕಾರ ಮಾಡಬೇಕು ಎಂದು ರಮೇಶ್ ಬಾಬು ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ, ಕೆಪಿಸಿಸಿ ಮುಖ್ಯ ವಕ್ತಾರರಾದ ತೇಜಸ್ವಿನಿ ರಮೇಶ್,
ಉಮೇಶ್ ಜಾದವ್ ಅವರು ಪಿಎಸ್ ಐಹಗರಣದ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳದೆ ಅವರ ಜೊತೆಯೇ ಕೈ ಜೋಡಿಸಿದ್ದಾರೆ. 58 ಸಾವಿರ ಯುವಕರ ಭವಿಷ್ಯವನ್ನು ಕದ್ದವರು 580 ಸ್ಥಾನಗಳಿಗೆ ಹಗಲು, ರಾತ್ರಿ ಓದಿದ ಯುವಕರ ಭವಿಷ್ಯ ಹಾಳು ಮಾಡಿದವರು. ಬಿಜೆಪಿಯವರ ಅಧರ್ಮದ ಹಗರಣಕ್ಕೆ ಸಿಲುಕಿ ಭವಿಷ್ಯವನ್ನು ಕಳೆದು ಕೊಂಡರು. ಇದು ಅನೀತಿಯ ರಾಜಕಾರಣ ಎಂದರು.
ಇವುಗಳಿಗೆ ನಾ ಖಾವೋಂಗಾ ನಾ ಖಾನೆದೋಂಗಾ ಎನ್ನುವ ಮೋದಿಯವರು ಉತ್ತರ ಕೊಡಬೇಕು. ಬಿಜೆಪಿಯವರೇ ಕಿಂಗ್ ಪಿನ್ ಗಳಾಗಿದ್ದರು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷ ಸಾಕಷ್ಟು ಸಾಕ್ಷಿಗಳನ್ನು ಮಾರ್ಚ್ ಜನರಿಗೆ, ಮಾಧ್ಯಮಗಳಿಗೆ ನೀಡಿದೆ. ಈ ರಾಜ್ಯದ ಮಾಜಿ ಸಿಎಂ, ಗೃಹ ಸಚಿವರ ಮೇಲೆಯೇ ಗಂಭೀರ ಆರೋಪಗಳಿಗೆ. ಇವುಗಳಿಗೆ ತಕ್ಕ ಶಿಕ್ಷೆ ನೀಡಲು ಜನರು ಮತದಾನದ ಮೂಲಕ ಉತ್ತರ ನೀಡಬೇಕು. ಇವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದರು.