ಬೆಂಗಳೂರು: ಅಪ್ಪು ‘ಪೃಥ್ವಿ’ ಸೇರುತ್ತಿದ್ದಂತೆಯೇ ರಾಜ್ ಕುಟುಂಬ ಮೌನಕ್ಕೆ ಶರಣಾಗಿದೆ. ಈ ಸಂದರ್ಭದಲ್ಲಿ ಪುನೀತ್ ಕುಟುಂಬಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಿ.ಟಿ.ರವಿ ಅವರು ಶಿವರಾಜ್‌ಕುಮಾರ್ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸುತ್ತಿರುವ ಫೊಟೋ ಗಮನಸೆಳೆದಿದೆ.
ಪುನೀತ್ ರಾಜ್‍ಕುಮಾರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿ.ಟಿ.ರವಿ, ಪುನೀತ್ ಸಹೋದರ ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬ ಸದಸ್ಯರನ್ನು ಸಮಾಧಾನ ಪಡಿಸಿದರು. ತಾವೂ ದುಃಖದಲ್ಲಿ ಭಾಗಿಯಾದರು.
ಪುನೀತ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ ನಂತರ ಮಾತನಾಡಿದ ಸಿ.ಟಿ.ರವಿ, ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿ ಕನ್ನಡಿಗರ ಕಣ್ಮಣಿಯೆನಿಸಿದ್ದ ನಟ ಪುನೀತ್ ರಾಜ್‍ಕುಮಾರ್, ಬದುಕಿನುದ್ದಕ್ಕೂ ಶೋಷಿತರ ಸೇವೆ ಮಾಡಿದ್ದಾರೆ ಎಂದರು. ಪುನೀತ್ ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ. ಬೇರೆಯವರ ಅಂಧಕಾರವನ್ನು ಹೋಗಲಾಡಿಸಿ, ಪ್ರಪಂಚ ನೋಡುವ ಭಾಗ್ಯವನ್ನು ಕರುಣಿಸಿದ್ದಾರೆ. ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶತ ಶತ ನಮನಗಳು ಎಂದು ಅವರು ತಿಳಿಸಿದ್ದಾರೆ.