ಬೆಂಗಳೂರು,: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು ಮೂರು ಬಾರಿ ಒಟ್ಟು 9 ರೂ. ಏರಿಸಿ ಜನರನ್ನು ಲೂಟಿ ಮಾಡಲಾಗಿದೆ. ಬಜೆಟ್‌ನಲ್ಲಿ ಯಾವುದೇ ತೆರಿಗೆಗಳನ್ನು ಹಾಕದೆ, ಹಿಡನ್ ಅಜೆಂಡಾ ಮಾಡಿ ಬಳಿಕ ತೆರಿಗೆ/ ದರ ಏರಿಕೆ ಮಾಡಲಾಗಿದೆ. ಪಾಪರ್ ಆಗಿಲ್ಲವೆಂದರೆ ಯಾಕಿಷ್ಟು ದರ ಏರಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಎಚ್ಚರಿಕೆ ನೀಡಿದ್ದೆ. ಬಜೆಟ್‌ನಲ್ಲೇ ತೆರಿಗೆಗಳನ್ನು ಹಾಕಬೇಕಿತ್ತು. ಆದರೆ ಬಜೆಟ್ ಮುಗಿದ ನಂತರ ತೆರಿಗೆ, ದರ ಏರಿಕೆ ಮಾಡಿದ್ದಾರೆ. ಬಜೆಟ್ ನಂತರ ಎಲ್ಲಾ ಮಾಧ್ಯಮಗಳಲ್ಲಿ ಶಹಭಾಸ್‌ಗಿರಿ ಬರಬೇಕೆಂದು ಈ ರೀತಿ ಮೋಸ ಮಾಡಿದ್ದಾರೆ. ಮೋಸ ಮಾಡುವುದರಲ್ಲಿ ಸಿದ್ದರಾಮಯ್ಯ ನಂ.1 ಆಗಿದ್ದಾರೆ. ಧೈರ್ಯ ಇದ್ದಿದ್ದರೆ ತೆರಿಗೆ ಹೆಚ್ಚಳ ಕುರಿತು ಬಜೆಟ್‌ನಲ್ಲೇ ಘೋಷಿಸಬೇಕಿತ್ತು ಎಂದರು.
ಇಡೀ ಆರ್ಥಿಕತೆ ವಿದ್ಯುತ್ ಹಾಗೂ ಪೆಟ್ರೋಲ್ ಮೇಲೆ ಅವಲಂಬಿತವಾಗಿದೆ. ಇದರ ದರ ಏರಿಕೆಯಾದರೆ ಎಲ್ಲ ವಸ್ತುಗಳ ದರ ಹೆಚ್ಚಾಗುತ್ತದೆ. ಕಾಂಗ್ರೆಸ್ ಸರ್ಕಾರ ಕೊಡುವ 2,000 ರೂಪಾಯಿಗಾಗಿ ಜನರು ಬವಣೆ ಅನುಭವಿಸಬೇಕಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ವೇಸ್ಟ್ ಬಾಡಿಯಾಗಿದ್ದು, ಅದರ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಅನವಶ್ಯಕವಾಗಿ 150 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಸಮಿತಿ ರದ್ದು ಮಾಡಿದ್ದರೆ ಇಷ್ಟು ಹಣ ಉಳಿಸಬಹುದಿತ್ತು. ಒಂದು ಕಡೆ ಪಕ್ಷಕ್ಕಾಗಿ ತೆರಿಗೆ ಹಣ ಬಳಸಲಾಗುತ್ತಿದೆ. ಮತ್ತೊಂದು ಕಡೆ ಜನರಿಗೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದರು.
ಯುಗಾದಿ ಹೊಸ ವರ್ಷ ಬರುವ ಸಮಯದಲ್ಲೇ ತೆರಿಗೆ ಹಾಕಲಾಗಿದೆ. ಹಬ್ಬಕ್ಕೆ ಬಳಸುವ ಹಾಲಿಗೂ ದರ ಏರಿಕೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಸಚಿವ ರಾಜಣ್ಣ ಅವರು ಉಡಾಫೆ ಮಾತಾಡಿದ್ದಾರೆ. ಚುನಾವಣೆಗೆ ಮೊದಲು ಎಲ್ಲವೂ ಫ್ರೀ ಎಂದು ಹೇಳಿ, ನಂತರ ಎಲ್ಲ ದರ ಏರಿಕೆ ಮಾಡಿದ್ದಾರೆ. ಈ 20 ತಿಂಗಳಲ್ಲಿ ಯಾವುದೇ ಜಲಾಶಯದ ಎತ್ತರಿಸಿಲ್ಲ. ಮೇಕೆದಾಟು ಯೋಜನೆ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಕಸದ ಮೇಲೆ ಹಸಿರು ಸೆಸ್ ಹಾಕಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಈಗ ಬ್ರ್ಯಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಸೃಷ್ಟಿಯಾಗಿದೆ ಎಂದರು.
ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಕೋರ್ಟ್ ಆದೇಶದಿಂದ ವಿದ್ಯುತ್ ದರ ಏರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ನೌಕರರ ಪಿಂಚಣಿಯನ್ನು ಸರ್ಕಾರ ನೀಡುವ ಬದಲು ಜನರೇ ನೀಡಬೇಕಾಗಿದೆ. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಜನರು ಇವರನ್ನು ನಂಬಿ ಮತ ನೀಡಿದ್ದರೆ, ಬದುಕು ನರಕ ಮಾಡಿದ್ದಾರೆ ಎಂದರು.